Haveri: ದೇವಸ್ಥಾನದಲ್ಲಿ ಮೂತ್ರ ಮಾಡಿದ ಕೇಸ್: ಇದು ಉದ್ದೇಶಪೂರ್ವಕ ಕೃತ್ಯ: ಬಸವರಾಜ ಬೊಮ್ಮಾಯಿ

Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಆರೋಪಿಸಿರುವ ಅವರು, ಶಿಗ್ಗಾವಿ–ಸವಣೂರು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಶಿಗ್ಗಾವಿ ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇದು ಕುಡಿದ ಮತ್ತಿನಲ್ಲಿ ನಡೆದ ಘಟನೆ ಅಲ್ಲ, ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ ಎಂದು ಆರೋಪಿಸಿದರು.

ಶಿಗ್ಗಾವಿ–ಸವಣೂರು ತಾಲೂಕಿನಲ್ಲಿ ಈ ರೀತಿಯ ಹಲವು ಘಟನೆಗಳು ನಡೆದಿವೆ ಎಂದು ಆರೋಪಿಸಿದ ಬೊಮ್ಮಾಯಿ, ಶಿಗ್ಗಾವಿಯಲ್ಲಿ ಗಾಂಜಾ ಸೇವಿಸಿ ಹಾಡಹಗಲೇ ಗುತ್ತಿಗೆದಾರನೊಬ್ಬನನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಕುಟುಂಬದ ಮೇಲೆ ಒತ್ತಡ ಹೇರಿ ಪ್ರಕರಣವನ್ನು ರಾಜಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಕೊಲೆಯಾದ ವ್ಯಕ್ತಿ ಮೂಲತಃ ಹಾನಗಲ್ ತಾಲೂಕಿನವನಾಗಿದ್ದು, ಶಿಗ್ಗಾವಿಯಲ್ಲಿ ಶಾಸಕರಿಂದ ಅವರಿಗೆ ಪಟ್ಟಾ ನೀಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದು ಉದ್ದೇಶಪೂರ್ವಕ ಕೃತ್ಯವೇ ಎಂಬ ಅನುಮಾನ ಮೂಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ದೇವಸ್ಥಾನದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಕರಣದ ತನಿಖೆಯ ಬಳಿಕವೇ ಘಟನೆಯ ನಿಜವಾದ ಹಿನ್ನೆಲೆ ಸ್ಪಷ್ಟವಾಗಬೇಕಿದೆ.

About The Author