Hubli News: ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಹೋರಾಟವನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಸ್ತೆ ಉಳಿಸುವಂತೆ ಆಗ್ರಹಿಸಿ ಇಂಡಿಪಂಪ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾರವಾರ–ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಪುಷ್ಕರಣಿ ವಿವಾದದ ವಿರುದ್ಧ ಇದೀಗ ಮತ್ತೊಂದು ಬಣ ಬೀದಿಗಿಳಿದಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿನಾಕಾರಣ ಪುಷ್ಕರಣಿ ಮತ್ತು ರಸ್ತೆ ವಿಚಾರವನ್ನು ವಿವಾದವನ್ನಾಗಿ ಮಾಡುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಹಳೇ ಹುಬ್ಬಳ್ಳಿಯ ಇಂಡಿಪಂಪ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಕಾರವಾರ–ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಿರುವ ರಸ್ತೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.
ಈ ರಸ್ತೆ ಅಲ್ಪಸಂಖ್ಯಾತರು ಹಾಗೂ ದಲಿತ ಜನರ ಸಂಚಾರ ಮತ್ತು ಸೌಕರ್ಯಕ್ಕಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಬಿಜೆಪಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಮೂಲಕ ಕೋಮು ಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಪುಷ್ಕರಣಿ ಜಾಗವನ್ನು ಸಂರಕ್ಷಿಸಿ, ನಿರ್ಮಿಸಿರುವ ರಸ್ತೆ ತೆರವುಗೊಳಿಸುವಂತೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಹೋರಾಟ. ಮತ್ತೊಂದೆಡೆ ರಸ್ತೆ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ದಲಿತಪರ ಸಂಘಟನೆಗಳ ಸಮರ್ಥನೆ. ಹೀಗಾಗಿ ಹಳೇ ಹುಬ್ಬಳ್ಳಿಯ ಪುಷ್ಕರಣಿ ಹಾಗೂ ರಸ್ತೆ ವಿವಾದ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
