ಹಬ್ಬಕ್ಕೂ ಮುನ್ನ ಭಾರಿ ದಂಡದ ಬಿಸಿ – Amazon-Flipkart ಮಾಡಿದ್ದೇನು?

ದೀಪಾವಳಿ ಹಬ್ಬದ ಶಾಪಿಂಗ್ ಸೀಸನ್ ಸಮೀಪಿಸುತ್ತಿರುವಂತೆಯೇ, ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಶಾಕ್ ನೀಡಿದ್ದು, ಶುಲ್ಕ ಹಾಗೂ ದಂಡದ ನಿಯಮಗಳನ್ನು ಕಠಿಣಗೊಳಿಸಿವೆ.

ಹಬ್ಬದ ಸಮಯದಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಈ ಹೊಸ ನಿಯಮಗಳು ತೀವ್ರ ಆರ್ಥಿಕ ಹೊರೆಯಾಗಿ ಪರಿಣಮಿಸಿವೆ. ಎಸ್ ‘ಅಮೆಜಾನ್ ಸಂಸ್ಥೆಯು Easy Ship ಹಾಗೂ Self Ship ಸೇವೆಗಳ ಮೇಲಿನ ಆರ್ಡರ್ ರದ್ದತಿ ಶುಲ್ಕದ ವಿಧಾನವನ್ನು ಬದಲಾಯಿಸಿದೆ. ಈ ಹಿಂದೆ ನಿಗದಿತ ವರ್ಗದ ಆಧಾರದ ಮೇಲಿದ್ದ ರದ್ದತಿ ಶುಲ್ಕವನ್ನು, ಈಗ ಆರ್ಡರ್ ಒಟ್ಟು ಮೌಲ್ಯದ ಶೇಕಡಾ 2 ರಿಂದ 10 ರಷ್ಟು ದಂಡ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸುವಂತೆ ಪರಿಷ್ಕರಿಸಲಾಗಿದೆ. ಇದರೊಂದಿಗೆ ಕ್ಲೋಸಿಂಗ್ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ.

ಮತ್ತೊಂದೆಡೆ ಫ್ಲಿಪ್‌ಕಾರ್ಟ್ ಸಂಸ್ಥೆಯು ಆರ್ಡರ್ ಪೂರೈಕೆಯಲ್ಲಿ ವಿಳಂಬ ಅಥವಾ ಲೋಪ ಎಸಗುವ ಮಾರಾಟಗಾರರಿಗಾಗಿ ಮೂರು ಹಂತದ ದಂಡದ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನಿಗದಿತ ಸಮಯಕ್ಕೆ ವಸ್ತುವನ್ನು ಸಿದ್ಧಪಡಿಸದಿದ್ದರೆ 30 ರೂಪಾಯಿ, ಆರ್ಡರ್ ರದ್ದಾದರೆ 60 ರೂಪಾಯಿ ಹಾಗೂ ವಿಳಂಬದ ನಂತರ ಆರ್ಡರ್ ರದ್ದಾದರೆ ಬರೋಬ್ಬರಿ 90 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಹೊಸ ವ್ಯಾಪಾರಿಗಳಿಗೆ ಮಾತ್ರ ಮೊದಲ ಮೂರು ತಿಂಗಳ ವಿನಾಯಿತಿ ನೀಡಲಾಗಿದೆ.

ತಾಂತ್ರಿಕ ದೋಷಗಳು ಅಥವಾ ಲಾಜಿಸ್ಟಿಕ್ಸ್ ತೊಂದರೆಗಳಿಂದ ಆರ್ಡರ್‌ಗಳು ರದ್ದಾದರೂ, ಅದಕ್ಕೆ ಸಣ್ಣ ವ್ಯಾಪಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ದಂಡ ವಿಧಿಸುವುದು ಸರಿಯಲ್ಲ ಎಂದು ಆನ್‌ಲೈನ್ ವ್ಯಾಪಾರಿಗಳ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಸಣ್ಣ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಇ-ಕಾಮರ್ಸ್ ಸಂಸ್ಥೆಗಳು ನ್ಯಾಯಯುತ ನೀತಿಗಳನ್ನು ರೂಪಿಸಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ ತಿಳಿಸಿ.

About The Author