ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮತ್ತೊಮ್ಮೆ ತಮ್ಮ ಖಡಕ್ ಟ್ವೀಟ್ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆಯೂ ನಮ್ಮ ಪೂರ್ವಜರ ವೈಜ್ಞಾನಿಕ ಚಿಂತನೆ ಇದೆ ಅಂತ ಜಗ್ಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಜಗ್ಗೇಶ್, ಎಂಥೆಂಥ ಧೂರ್ತರು ಭಾರತವನ್ನ ಆಳಿ, ಸನಾತನ ಧರ್ಮದ ಪರಂಪರೆಗಳನ್ನ ನೆಲಸಮ ಮಾಡೋಕೆ ಪ್ರಯತ್ನಿಸಿದ್ದರು. ಆದ್ರೆ ಅವರು ಬಿಟ್ಟುಹೋದ ಅಲ್ಪ ಕುರುಹುಗಳು ಇಂದು ಮತ್ತೆ ಚಿಗುರಿ ಹೆಮ್ಮರವಾಗ್ತಿವೆ. ಅದನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ, ಅದೇ ಸನಾತನ ಧರ್ಮದ ತಾಕತ್ತು ಅಂತ ಗುಡುಗಿದ್ದಾರೆ.
ಅಷ್ಟೇ ಅಲ್ಲ, ರಾಜಕೀಯ ನಾಯಕರಿಗೂ ಜಗ್ಗೇಶ್ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಹಿಂದೂಗಳು ಬಹುಸಂಖ್ಯಾತರಿರುವ ಮೊದಲಿಗ ರಾಷ್ಟ್ರ ಭಾರತ ಅನ್ನೋದು ಎಲ್ಲಾ ತಲೆಮಾರಿಗೂ ನೆನಪಿರಲಿ. ಇದನ್ನ ಮರೆತು ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಬಲವಂತದಿಂದ ಸೆಕ್ಯೂಲರ್ ಪದ ಬಳಸಿಕೊಂಡು ಅಧಿಕಾರ ಪಡೆಯಬಹುದು. ಆದ್ರೆ ಯಾರೂ ಶಾಶ್ವತ ಅಲ್ಲ ಅಂತ ಕಿಡಿಕಾರಿದ್ದಾರೆ.
ಮುಂದೆ ನಿಮ್ಮ ತಪ್ಪಿಗೆ ನಿಮ್ಮದೇ ಮನೆತನದ ತಲೆಮಾರು ಹಿಂದೂ ಆಚರಣೆಯಿಂದ ವಂಚಿತರಾಗಿ, ಸ್ವಲಾಭಕ್ಕೆ ನಮ್ಮ ಆಚರಣೆ ಹಾಳುಮಾಡಿ ಹೋದಿರಿ ಅಂತ ಗೋಡೆ ಮೇಲಿರೋ ನಿಮ್ಮ ಫೋಟೋಗೆ ಉಗಿದು ಶಪಿಸುತ್ತಾರೆ ಅಂತ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಹಿಂದಿನ ಸನಾತನ ಬೇರಿಂದ ಚಿಗುರಿದವರೇ ಇಂದಿನವರು ಅನ್ನೋದನ್ನ ಮರೆಯಬೇಡಿ. ಸನಾತನ ಧರ್ಮ ತುಳಿಯಲು ಯತ್ನಿಸಬೇಡಿ, ಮುಂದೆ ಅನ್ಯಾಯ ಚಂಡಾಡಿ ಸನಾತನ ಧರ್ಮ ಉಳಿಸಲು ಕಲ್ಕಿ ಬರುತ್ತಾನೆ ಅಂತಲೂ ಜಗ್ಗೇಶ್ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಜಗ್ಗೇಶ್ ಅವರ ಈ ಹೊಸ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.




