ಹಿಮಾಲಯದ ಮಡಿಲಲ್ಲಿ ಪ್ರಕೃತಿ ಕರುಣೆ ತೋರದೆ ಸೃಷ್ಟಿಸಿದ ಮಹಾಪ್ರಳಯದ ಕರಾಳ ಮುಖ ಈಗ ಒಂದೊಂದಾಗಿ ಹೊರಬರುತ್ತಿದೆ. ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಿಮಪಾತ ಹಾಗೂ ಜಲಪ್ರಳಯವು ಸೃಷ್ಟಿಸಿದ ನಷ್ಟ ಅತಿ ದೊಡ್ಡದು. ಸಾವಿನ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದರೆ, ಬರೋಬ್ಬರಿ 1,500ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ಈ ಭೀಕರ ವಿಪತ್ತಿನ ಕಥನ ಇಲ್ಲಿದೆ ನೋಡಿ.
ಹೌದು ‘ಹಿಮಾಲಯದ ಉತ್ತುಂಗದಲ್ಲಿ ಹುಟ್ಟುವ ನದಿಗಳು ಕೆಲವೊಮ್ಮೆ ಜೀವದಾತಗಳಾದರೆ, ಇನ್ನು ಕೆಲವೊಮ್ಮೆ ಅವು ಸಾವಿನ ದೂತರಾಗಿ ಬದಲಾಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ರಸುವಾ, ಧಾದಿಂಗ್ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಭೋಟೆ ಕೋಶಿ ನದಿಯ ಉಪನದಿಯ ಹರಿವಿಗೆ ಹಿಮಪಾತದಿಂದ ಹಠಾತ್ ತಡೆ ಉಂಟಾಯಿತು. ಕ್ಷಣಮಾತ್ರದಲ್ಲಿ ಸೃಷ್ಟಿಯಾದ ಆ ಜಲಸ್ಫೋಟ ರಸ್ತೆಗಳು, ಸೇತುವೆಗಳು ಮತ್ತು ಬೃಹತ್ ಜಲವಿದ್ಯುತ್ ಯೋಜನೆಗಳನ್ನು ಕೇವಲ ಕಸದಂತೆ ಕೊಚ್ಚಿಕೊಂಡು ಹೋಯಿತು.
ಈ ದುರಂತದಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನೂರಾರು ಪ್ರವಾಸಿಗರು ಹಾಗೂ ಯಾತ್ರಿಕರು ಗಡಿಯಲ್ಲಿ ಸಿಲುಕಿಕೊಂಡರು. ಆರಂಭದಲ್ಲಿ ಸುಮಾರು 300 ಭಾರತೀಯರು ನಾಪತ್ತೆಯಾಗಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿತ್ತು. ಆದರೆ, ತ್ವರಿತವಾಗಿ ಕಾರ್ಯಪ್ರವೃತ್ತರಾದ ರಕ್ಷಣಾ ತಂಡಗಳು ಇದುವರೆಗೆ ಸುಮಾರು 100 ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿವೆ. ಆದರೂ, ಇನ್ನೂ ನೂರಾರು ಜನರ ವಿಳಾಸ ಸಿಗದೆ ಕುಟುಂಬಗಳು ಆತಂಕದಲ್ಲೇ ದಿನ ಕಳೆಯುತ್ತಿವೆ.
ಹಾಗೇನೇ ‘ಚೀನಾದ ಗ್ಯಿರಾಂಗ್ ಪ್ರದೇಶದಲ್ಲೂ ನಿಸರ್ಗದ ಈ ಕೋಪಕ್ಕೆ ನೂರಾರು ಮಂದಿ ಬಲಿಯಾಗಿದ್ದು, ಅಲ್ಲಿಯೂ ರಕ್ಷಣಾ ಕಾರ್ಯ ಮುಂದುವರಿದಿದೆ ಅಂತ ಹೇಳಲಾಗ್ತಿದೆ. ಈ ಕಷ್ಟದ ಸಮಯದಲ್ಲಿ ಭಾರತ ಸರ್ಕಾರ ತಕ್ಷಣವೇ ಸ್ಪಂದಿಸಿದ್ದು, ವಾಯುಪಡೆಯ C-130J ವಿಮಾನಗಳ ಮೂಲಕ ಟೆಂಟ್ಗಳು, ಔಷಧಿಗಳು ಹಾಗೂ 37.5 ಟನ್ಗಳಿಗೂ ಅಧಿಕ ತುರ್ತು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನಿಸಲಾಗಿದೆ. ಜೊತೆಗೆ ‘ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಶೇಷ ಸಹಾಯವಾಣಿಗಳನ್ನು ತೆರೆದು ಸಂತ್ರಸ್ತರ ನೆರವಿಗೆ ನಿಂತಿದೆಯಂತೆ .
ಮತ್ತೊಂದೆಡೆ, ನೇಪಾಳದ ಪ್ರಧಾನಿ ‘ಬಾಲೇಂದ್ರ ಶಾ’ ಸ್ವತಃ ಪ್ರವಾಹ ಪೀಡಿತ ನುವಾಕೋಟ್ಗೆ ಭೇಟಿ ನೀಡಿ ಪರಿಸ್ಥಿತಿಯ ನೇತೃತ್ವ ವಹಿಸಿದ್ದಾರೆ. 5,000ಕ್ಕೂ ಅಧಿಕ ಸೈನಿಕರು ದಿನಪೂರ್ತಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಕೃತಿಯ ಮುಲಾಜಿಲ್ಲದ ಈ ತಾಂಡವಕ್ಕೆ ಲಕ್ಷಾಂತರ ಜೀವಗಳು ಅಸ್ತವ್ಯಸ್ತಗೊಂಡಿವೆ. ನಾಪತ್ತೆಯಾಗಿರುವವರ ರಕ್ಷಣೆಗಾಗಿ ಇಡೀ ಉಪಖಂಡವೇ ಉಸಿರುಬಿಗಿದುಕೊಂಡು ಕಾಯುತ್ತಿದ್ದು, ಈ ದುರಂತದ ಸಂಪೂರ್ಣ ಆಘಾತದಿಂದ ಹೊರಬರಲು ಇನ್ನೂ ಹಲವು ದಿನಗಳೇ ಬೇಕಾಗಬಹುದು.
