Koppala News: ಕೊಪ್ಪಳ :- ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ,ಕೊಪ್ಪಳದಲ್ಲಿ ಬಿಜೆಪಿ ಪಕ್ಷದಿಂದ ಹೋರಾಟ ನಡೆಸಲಾಯಿತು.
ಯಲಬುರ್ಗಾ,ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕುಗಳ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ಸಚಿವ ಶಿವರಾಜ್ ತಂಗಡಗಿ ಭಾವಚಿತ್ರ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.
ರಾಜ್ಯ ಸರ್ಕಾರದ ಅವೈಜ್ಞಾನಿಕ ಹಾಗೂ ತಾರತಮ್ಯಪೂರ್ಣ ರೈತವಿರೋಧಿ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಬರದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಗಂಗಾವತಿ, ಕುಕನೂರು ಹಾಗೂ ಕನಕಗಿರಿ ತಾಲ್ಲೂಕುಗಳನ್ನು ತೀವ್ರ ಬರಪೀಡಿತವೆಂದು ಘೋಷಿಸಿರುವ ಸಂದರ್ಭದಲ್ಲಿ, ಜಿಲ್ಲೆಯ ಇತರ ತಾಲ್ಲೂಕುಗಳಲ್ಲೂ ಮಳೆ ಕೊರತೆ ಹಾಗೂ ಬೆಳೆ ಹಾನಿ ಎದುರಾಗಿದೆ.
ಹೀಗಾಗಿ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕುಗಳನ್ನೂ ಕೈಬಿಡದೆ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಸಂಸದೆ ಹೇಮಲತಾ ನಾಯಕ್ ಹಾಗೂ ಬಿಜೆಪಿ ಮುಖಂಡರು ಡಾ// ಬಸವರಾಜ್ ಆಗ್ರಹಿಸಿದರು
ಮಳೆ ಕೊರತೆಯ ಅಂಕಿ-ಅಂಶಗಳತ್ತ ಗಮನ ಹರಿಸಿದರೆ, ಕೊಪ್ಪಳ ತಾಲ್ಲೂಕು ಸೇರಿದಂತೆ ಯಲಬುರ್ಗಾ, ಮತ್ತು ಕುಷ್ಟಗಿಯಲ್ಲಿ ಮಳೆ ಕೊರತೆ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಆಗಸ್ಟ್ ಮಧ್ಯಭಾಗದವರೆಗೆ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ತಿಳಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳಿಗೆ ಅಗತ್ಯವಿರುವ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರಿದೆ.
ಸರ್ಕಾರಕ್ಕೆ ಪ್ರಮುಖ ಆಗ್ರಹಗಳು
ಮುಖ್ಯವಾಗಿ ಮೂರು ತಾಲ್ಲೂಕುಗಳಲ್ಲಿ ತಕ್ಷಣ ಬೆಳೆ ಸಮೀಕ್ಷೆ ನಡೆಸಬೇಕು.
ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರ ಆದೇಶ ಹೊರಡಿಸಬೇಕು.
ವೈಜ್ಞಾನಿಕ ಬೆಳೆಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು.
ಒಟ್ಟಿನಲ್ಲಿ, ಮಳೆ ಕೊರತೆ ಮತ್ತು ಬರದ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಬರಪೀಡಿತ ಪ್ರದೇಶಗಳ ಪಟ್ಟಿಗೆ ಅಗತ್ಯ ತಾಲ್ಲೂಕುಗಳನ್ನು ಸೇರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.

