ರಾಜ್ಯದ ಜನತೆಗೆ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ಮತ್ತು ಅಷ್ಟೇ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಹೌದು ‘ರಾಜ್ಯಾದ್ಯಂತ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೌದು, ಪ್ರಸಕ್ತ ತಿಂಗಳು ಪಡಿತರ ವ್ಯವಸ್ಥೆಯಲ್ಲಿ ರಾಜ್ಯದ ಪಾಲಿನ ಅಕ್ಕಿ ಲಭ್ಯವಿಲ್ಲದಿರುವುದೇ ಈ ಅಡಚಣೆಗೆ ಪ್ರಮುಖ ಕಾರಣವಾಗಿದೆ ಅಂತ ಕೇಳಿಬಂದಿದೆ.
ಸಾಮಾನ್ಯವಾಗಿ ರಾಜ್ಯ ಸರ್ಕಾರದ ವತಿಯಿಂದ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಇದು ಬಡಕುಟುಂಬಗಳಿಗೆ ಬಹಳ ದೊಡ್ಡ ಆಸರೆಯಾಗಿತ್ತು. ಆದರೆ ಈ ತಿಂಗಳು ಕೇವಲ ಕೇಂದ್ರ ಸರ್ಕಾರದ ಪಾಲಿನ ನಾಲ್ಕು ಕೆಜಿ ಅಕ್ಕಿ ಮತ್ತು ಆರು ಕೆಜಿ ರಾಗಿ ಮಾತ್ರ ವಿತರಣೆಯಾಗುತ್ತಿದೆ. ರಾಜ್ಯ ಸರ್ಕಾರದ ಅಕ್ಕಿ ಬಾರದೆ ಇರುವುದರಿಂದ, “ನಮ್ಮ ಅನ್ನಭಾಗ್ಯದ ಅಕ್ಕಿ ಈ ತಿಂಗಳು ಯಾಕೆ ಬಂದ್ ಆಗಿದೆ?” ಎಂಬ ಹತ್ತು ಹಲವು ಪ್ರಶ್ನೆಗಳು ಮತ್ತು ಗೊಂದಲಗಳು ಸಾರ್ವಜನಿಕರಲ್ಲಿ ಎದ್ದಿವೆ.
ರಾಜ್ಯ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂನ ನ್ಯಾಯಬೆಲೆ ಅಂಗಡಿಯಲ್ಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೂ ಸಹ ಯಾವುದೇ ರಾಜ್ಯದ ಪಾಲಿನ ಅಕ್ಕಿ ಸಿಗುತ್ತಿಲ್ಲ, ಬದಲಿಗೆ ಕೇವಲ ಕೇಂದ್ರದ ಪಾಲಿನ ಅಕ್ಕಿ ಮತ್ತು ರಾಗಿ ಮಾತ್ರ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಪಡಿತರ ಗ್ರಾಹಕರು ಅಂಗಡಿ ಮಾಲೀಕರನ್ನು ಪ್ರಶ್ನಿಸುತ್ತಿದ್ದು, ಅಂಗಡಿ ಮಾಲೀಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಂಗಡಿ ಮಾಲೀಕರು ನೀಡಿರುವ ಮಾಹಿತಿ ಪ್ರಕಾರ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಈ ತಿಂಗಳು ಮಾತ್ರ ಈ ವ್ಯತ್ಯಯ ಉಂಟಾಗಿದೆ. ಆದರೆ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ; ಮುಂದಿನ ತಿಂಗಳಿನಿಂದ ಅಂದರೆ ಸೆಪ್ಟೆಂಬರ್ನಿಂದ ಮತ್ತೆ ಎಂದಿನಂತೆ ಅನ್ನಭಾಗ್ಯದ ಅಕ್ಕಿ ವಿತರಣೆ ಸುಗಮವಾಗಿ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ, ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯದ ಅಕ್ಕಿ ಸಿಗದಿದ್ದರೂ, ಸೆಪ್ಟೆಂಬರ್ ತಿಂಗಳಿಂದ ಪಡಿತರದಾರರಿಗೆ ಎಂದಿನಂತೆ ಪೂರ್ಣ ಪ್ರಮಾಣದ ಅಕ್ಕಿ ಸಿಗುವ ನಿರೀಕ್ಷೆಯಿದೆ.




