ಜಾಲಿ ಮರದಲ್ಲಿ ಹಣ್ಣು ಸಿಗುತ್ತಾ? ರಾಜೀನಾಮೆ ಕೊಡುತ್ತೇನೆಂದ ‘ಕೈ’ ಶಾಸಕ!

ಜಗಳೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಅಧಿಕೃತ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಅವರು ತಮ್ಮದೇ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಜಗಳೂರಿನಲ್ಲಿ ಮಾತನಾಡಿದ ಅವರು, ತಮ್ಮ ತಾಲೂಕಿನ ಜನರಿಗೆ ನ್ಯಾಯ ಸಿಗದಿದ್ದರೆ ಶಾಸಕನಾಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಾಲೂಕಿನ ಬರ ಪರಿಸ್ಥಿತಿಯನ್ನು ನಿರ್ಲಕ್ಷಿಸುತ್ತಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಆದಾಗ್ಯೂ, ಸರ್ಕಾರ ಬಿಡುಗಡೆ ಮಾಡಲಿರುವ ಎರಡನೇ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ತಾಲೂಕನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ಹಿರಿಯ ನಾಯಕರು ತಿಳಿಸಿರುವುದರಿಂದ, ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಶಾಸಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ತಮ್ಮದೇ ಸರ್ಕಾರದ ಆಡಳಿತದ ವಿರುದ್ಧ ತೀಕ್ಷ್ಣವಾದ ನುಡಿಗಳನ್ನಾಡಿರುವ ಶಾಸಕ ದೇವೇಂದ್ರಪ್ಪ, ಹಣ್ಣು ಬಿಡುವ ಮರದ ಕೆಳಗೆ ಹೋದರೆ ಮಾತ್ರ ನಮಗೆ ಹಣ್ಣು ಸಿಗುತ್ತದೆ, ಜಾಲಿ ಮರದ ಕೆಳಗೆ ಹೋಗಿ ಹಣ್ಣು ನಿರೀಕ್ಷಿಸಲು ಸಾಧ್ಯವೇ ಎಂದು ಹೇಳುವ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯಲ್ಲಿದ್ದರೆ ಜಗಳೂರು ಕ್ಷೇತ್ರಕ್ಕೆ ಯಾವುದೇ ನ್ಯಾಯ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ ಅವರು, ಕಲ್ಯಾಣ ಕರ್ನಾಟಕದ ಕಡೆ ಮುಖ ಮಾಡಿದರೆ ಮಾತ್ರ ವಿಶೇಷ ಅನುದಾನದ ಅಡಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು. ಜೊತೆಗೆ ‘ಜಗಳೂರನ್ನು ಕಲ್ಯಾಣ ಕರ್ನಾಟಕ ವಲಯಕ್ಕೆ ಸೇರಿಸಿ ಎಂದು ತಾವು ಇಟ್ಟಿರುವ ಒತ್ತಾಯಕ್ಕೆ ಈಗಲೂ ಬದ್ಧವಾಗಿರುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿದರು.

ಒಟ್ಟಿನಲ್ಲಿ, ಸ್ವಪಕ್ಷೀಯ ಶಾಸಕರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ರಾಜೀನಾಮೆ ಅಸ್ತ್ರವನ್ನು ಪ್ರಯೋಗಿಸಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ

About The Author