ಈಗಾಗಲೇ ಭೀಕರ ಪ್ರವಾಹದಿಂದ ನೊಂದಿರುವ ನೇಪಾಳ ದೇಶಕ್ಕೆ ಈಗ ಮತ್ತೊಂದು ಆಪಾಯದ ಕಾರ್ಮೋಡ ಕವಿದಿದೆ! ಹೌದು, ನೇಪಾಳದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು, ದೇಶದ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗಗಳ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಇತ್ತೀಚಿನ ಎಚ್ಚರಿಕೆಯ ಪ್ರಕಾರ, ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿ ಸಣ್ಣ ನದಿಗಳು ಹಾಗೂ ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಹಠಾತ್ ಪ್ರವಾಹ ಉಂಟಾಗುವ ಅತಿ ಹೆಚ್ಚಿನ ಅಪಾಯವಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಪೂರ್ವ ಮತ್ತು ಮಧ್ಯ ನೇಪಾಳದ ತಪ್ಲೆಜಂಗ್, ಸಂಖುವಸಭಾ, ಸೋಲುಖುಂಬು, ಖೋಟಾಂಗ್, ಓಖಲ್ಧುಂಗಾ, ರಾಮೆಚಾಪ್, ಡೋಲಾಖಾ, ಸಿಂಧುಪಾಲ್ಚೌಕ್, ಕವ್ರೆಪಾಲಂಚೋಕ್, ಲಲಿತಪುರ, ಭಕ್ತಪುರ, ಕಠ್ಮಂಡು ಹಾಗೂ ಧಾಡಿಂಗ್ ಜಿಲ್ಲೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗುವ ಮಧ್ಯಮ ಎಚ್ಚರಿಕೆ ನೀಡಲಾಗಿದೆ.
ಇದರ ಜೊತೆಗೆ ‘ಪಶ್ಚಿಮ ಭಾಗದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಗೂರ್ಖಾ, ಲ್ಯಾಮ್‌ಜಂಗ್, ಡೋಲ್ಪಾ, ರುಕುಮ್ ಪೂರ್ವ, ರುಕುಮ್ ಪಶ್ಚಿಮ, ಜಾಜರ್‌ಕೋಟ್, ಡಾರ್ಚುಲಾ, ಬೈತಾಡಿ, ದದೇಲ್ಧುರಾ, ದೋತಿ, ಕೈಲಾಲಿ ಮತ್ತು ಕಾಂಚನ್‌ಪುರ ಜಿಲ್ಲೆಗಳಲ್ಲೂ ಕೂಡ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ನದಿ ಪಾತ್ರಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಆಡಳಿತ ಮಂಡಳಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಧಿಕಾರ ಮನವಿ ಮಾಡಿದೆ.




