BPL ಕಾರ್ಡ್‌ ರದ್ದಾಗುತ್ತಾ? ಸರ್ಕಾರ ಹೇಳಿದ್ದೇನು ಗೊತ್ತಾ?

ರಾಜ್ಯದಲ್ಲಿ ಮುಂದಿನ ಮೂರು ತಿಂಗಳ ಕಾಲ ಯಾವುದೇ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಎಸ್ ‘ಬಿಪಿಎಲ್ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳು ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ಮಾನದಂಡಗಳು ಇಂದಿನ ಆರ್ಥಿಕ ವ್ಯವಸ್ಥೆಗೆ ಸೂಕ್ತವಾಗಿಲ್ಲ ಹಾಗೂ ಅವುಗಳನ್ನು ಬದಲಾಯಿಸುವುದು ಅನಿವಾರ್ಯವಾಗಿದೆ. ಬಹಳಷ್ಟು ಅರ್ಹ ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ವಂಚಿತರಾಗಿದ್ದು, ಅವರನ್ನು ಹೊಸದಾಗಿ ಪಟ್ಟಿಗೆ ಸೇರಿಸಬೇಕಿದೆ. ಯಾವುದೇ ಸರಿಯಾದ ಪರಿಶೀಲನೆ ಇಲ್ಲದೆ ಏಕಾಏಕಿ ಕಾರ್ಡ್‌ಗಳನ್ನು ರದ್ದುಪಡಿಸಿದರೆ ಬಡವರಿಗೆ ತೀವ್ರ ಅನ್ಯಾಯವಾಗುತ್ತದೆ. ಹೀಗಾಗಿ, ಮೂರು ತಿಂಗಳ ಬಳಿಕ ಈ ಕುರಿತು ಸ್ಪಷ್ಟ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ, ಶಾಸಕ ಬಸವರಾಜ್ ರಾಯರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ರಾಯರೆಡ್ಡಿ ಅವರು ಧರ್ಮದ ಬಗ್ಗೆ ಸೌಹಾರ್ದತೆಯಿಂದ ಮಾತನಾಡಿದ್ದಾರೆ ಹೊರತು ಯಾವುದೇ ಧರ್ಮವನ್ನು ನಿಂದಿಸಿಲ್ಲ. ನಾಳೆ ತಾವೂ ಕೂಡ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ ಅವರು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ರಿಜ್ವಾನ್ ಅರ್ಷದ್, ಬಿಜೆಪಿಗೆ ಯಾವಾಗಲೂ ಹಿಂದೂ-ಮುಸ್ಲಿಂ ವಿಚಾರವೇ ಪ್ರಮುಖ ರಾಜಕೀಯ ಅಜೆಂಡಾ ಆಗಿದೆ ಎಂದು ದೂರಿದರು. ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಅಥವಾ ಜನರ ನೈಜ ಸಮಸ್ಯೆಗಳ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕನೂ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಯಲ್ಲಿ ‘ಪಡಿತರ ಚೀಟಿ ರದ್ದತಿಗೆ ತಾತ್ಕಾಲಿಕ ತಡೆ ನೀಡಿರುವ ಸರ್ಕಾರದ ಈ ನಿರ್ಧಾರ ಬಡವರಿಗೆ ಕೊಂಚ ನಿರಾಳತೆಯನ್ನು ತಂದಿದೆ ಅಂತ ಹೇಳಬಹುದು. ಈ ರಾಜಕೀಯ ಬೆಳವಣಿಗೆಗಳ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ..

About The Author