ಕರ್ನಾಟಕದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣದ ಕುರಿತು ಫಲಾನುಭವಿಗಳಲ್ಲಿ ಇದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಎಸ್ ‘ಯೋಜನೆಯ ಮರುಪರಿಶೀಲನೆ ಹಾಗೂ ಸಮೀಕ್ಷೆ ನಡೆಯುತ್ತಿದ್ದರೂ ಸಹ, ಅರ್ಹ ಫಲಾನುಭವಿಗಳಿಗೆ 33ನೇ ಕಂತಿನ ಹಣವನ್ನು ಈ ತಿಂಗಳಲ್ಲಿಯೇ ಪಾವತಿಸಲು ಸರ್ಕಾರ ತೀರ್ಮಾನಿಸಿದೆ.
ಅನರ್ಹರನ್ನು ಪತ್ತೆಹಚ್ಚಿ ಹೊರಹಾಕಲು ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಫಲಾನುಭವಿಗಳ ಮಾಹಿತಿ ಸಂಗ್ರಹಿಸುವ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಈ ಪರಿಶೀಲನೆ ನಡೆಯುವ ಕಾರಣಕ್ಕೆ ಹಣದ ಪಾವತಿ ನಿಲ್ಲಲಿದೆ ಎಂಬ ಆತಂಕ ಕೆಲವರಲ್ಲಿ ಮೂಡಿತ್ತು. ಆದರೆ, ಅರ್ಹ ಫಲಾನುಭವಿಗಳಿಗೆ ಹಣ ಪಾವತಿಸುವ ಪ್ರಕ್ರಿಯೆ ಎಂದಿನಂತೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಗಣತಿದಾರರು ಮನೆಗೆ ಬಂದಾಗ ಆಧಾರ್ ಕಾರ್ಡ್, ಫೋಟೋ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರಗಳಂತಹ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ಒಂದು ವೇಳೆ ಗಣತಿದಾರರು ಬರುವಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಉದ್ಯೋಗ ಅಥವಾ ಇತರೆ ಕಾರಣಗಳಿಂದ ಹೊರಹೋಗುವ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಪಡಿತರ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಮೂಲಕ ಮಾಹಿತಿ ಸಲ್ಲಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಮರುಪರಿಶೀಲನೆಯ ನೆಪದಲ್ಲಿ ಹಣ ಕಡಿತವಾಗುತ್ತದೆ ಎಂಬ ಟೆನ್ಶನ್ ಬೇಡ. ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಯಾಗಿಟ್ಟುಕೊಂಡು, ಸಮೀಕ್ಷಾ ತಂಡದೊಂದಿಗೆ ಸಹಕರಿಸುವಂತೆ ಹಾಗೂ ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.




