‘ನಾನ್‌ಸೆನ್ಸ್ ಮಾತನಾಡ್ತಿದ್ದಾರೆ’ – ಯಶ್ ತಾಯಿಗೆ ತೆಲುಗು ಮಂದಿ ಕಿಡಿ!

ರಾಕಿಂಗ್ ಸ್ಟಾರ್ ಯಶ್ ಹಾಗೂ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ಹೈಪ್ ಇದ್ದರೂ, ಬಿಡುಗಡೆಯ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದರಲ್ಲೂ ಮೊದಲ ಪ್ರದರ್ಶನ ಮುಗಿಯುವ ಮುನ್ನವೇ ತೆಲುಗು ವಲಯದಿಂದ ಅತಿಯಾದ ನೆಗೆಟಿವ್ ರಿವ್ಯೂಗಳು ಹರಿದುಬಂದಿದ್ದು, ಇದು ಯಶ್ ಬೆಳವಣಿಗೆಯ ವಿರುದ್ಧದ ಷಡ್ಯಂತ್ರ ಎಂದು ಕನ್ನಡ ಸಿನಿ ರಸಿಕರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಯಶ್ ತಾಯಿ ಪುಷ್ಪ ಅವರು ನಡೆಸಿದ ಪತ್ರಿಕಾಗೋಷ್ಠಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಯಶ್ ವಿರುದ್ಧ ಷಡ್ಯಂತ್ರ ನಡೆದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಶ್ ಅದನ್ನೆಲ್ಲ ದಾಟಿ ಬೆಳೆದಿದ್ದಾನೆ, ಒಬ್ಬ ಡ್ರೈವರ್ ಮಗನಿಗೆ ಇಷ್ಟೆಲ್ಲ ಹೆದರಿಕೊಳ್ಳಬೇಕಾ ಎಂದಿದ್ದಾರೆ. ಅದರ ಜೊತೆಗೆ ಈ ‘ಟಾಕ್ಸಿಕ್’ ಸಿನಿಮಾ ದೊಡ್ಡವರಿಗೆ ಮಾತ್ರ ಎಂದು ಮೊದಲೇ ಹೇಳಿದ್ದರೂ ಕುಟುಂಬ ಸಮೇತ ನೋಡಲಾಗುತ್ತಿಲ್ಲ ಎಂದು ಟೀಕಿಸುತ್ತಿರುವವರನ್ನು ‘ಅಬ್‌ನಾರ್ಮಲ್‌ಗಳು’ ಎಂದು ಯಶ್ ಅವರ ತಾಯಿ ಜರಿದಿದ್ದಾರೆ..

ಇನ್ನು ಇದರ ಜೊತೆಗೆ ‘ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ತೆಲುಗಿನ ಜನಪ್ರಿಯ ‘ಆಕಾಶವಾಣಿ’ ಸಿನಿಮಾ ಪೇಜ್, ‘ಟಾಕ್ಸಿಕ್’ ಸಿನಿಮಾ ಜನರಿಗೆ ಹಿಡಿಸಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ತಿರುಗೇಟು ನೀಡಿದೆ. ಯಶ್ ತಾಯಿ ಮಾಧ್ಯಮಗಳ ಮುಂದೆ ಬಂದು ಈ ರೀತಿಯ ಸಿಲ್ಲಿ ಕಾರಣಗಳನ್ನು ಮುಂದಿಟ್ಟು ಮಾತನಾಡುವುದು ನಾನ್‌ಸೆನ್ಸ್ ಎಂದು ಪೋಸ್ಟ್ ಮಾಡಿದೆ. ಅಲ್ಲದೆ ಈ ಹಿಂದೆ ಅಲ್ಲು ಅರವಿಂದ್ ಆಡಿದ ಮಾತುಗಳನ್ನು ಕನ್ನಡದವ್ರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದೂ ಸಮರ್ಥಿಸಿಕೊಂಡಿದೆ.

ಜೊತೆಗೆ ‘ಅಲ್ಲು ಅರವಿಂದ್ ಅವರು ಕನ್ನಡದ ‘ಕಾಂತಾರ’ ಹಾಗೂ ‘ಮಹಾವತಾರ್ ನರಸಿಂಹ’ ಚಿತ್ರಗಳನ್ನು ತೆಲುಗು ರಾಜ್ಯಗಳಲ್ಲಿ ವಿತರಿಸಿದ್ದಾರೆ, ಅಂತಹವರು ಕನ್ನಡ ಚಿತ್ರದ ವಿರುದ್ಧ ಹೇಗೆ ಷಡ್ಯಂತ್ರ ನಡೆಸಲು ಸಾಧ್ಯ, ಚಿತ್ರ ಚೆನ್ನಾಗಿದ್ದರೆ ಜನರು ಮೆಚ್ಚುತ್ತಾರೆ, ಇಲ್ಲದಿದ್ದರೆ ಟೀಕಿಸುತ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ‘ಆಕಾಶವಾಣಿ’ ಸಿನಿಮಾ ಪೇಜ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ನಿಮ್ಮನಿಸಿಕೆ ಏನು ಕಾಮೆಂಟ್ ಮಾಡಿ..

About The Author