Janmashtami Special: ಶ್ರೀಕೃಷ್ಣನಿಂದಲೇ ಪೂತನೀಯ ಸಂಹಾರವಾಗಿದ್ದೇಕೆ..? ಯಾರವಳು..?

Janmashtami Special: ಶ್ರೀಕೃಷ್ಣ ಲೀಲೆಯಲ್ಲಿ ಬರುವ 1 ಕಥೆ ಪೂತನಿ ಸಂಹಾರದ ಕಥೆ. ಜನ್ಮಾಷ್ಠಮಿಯ ಪ್ರಯುಕ್ತವಾಗಿ ನಾವಿಂದು ಪೂತನಿ ಸಂಹಾರವಾಗಿದ್ದೇಕೆ..? ಶ್ರೀಕೃಷ್ಣನಿಂದಲೇ ಆಕೆಯ ಸಂಹಾರವಾಗಿದ್ದೇಕೆ ಎಂಬ ಬಗ್ಗೆ ವಿವರಿಸಲಿದ್ದೇವೆ.

ಪೂತನಿಯ ಪೂರ್ವ ಜನ್ಮದ ಶಾಪದಿಂದ ಆಕೆ ರಾಕ್ಷಸಿಯಾಗಿ ಜನ್ಮ ತಾಳಿದ್ದಳು. ಮತ್ತು ಶ್ರೀಕೃಷ್ಣನ ಸಂಹಾರದಿಂದಲೇ ಆಕೆಯ ಶಾಪ ವಿಮೋಚನೆಯಾಗಿತ್ತು.

ಪೂರ್ವ ಜನ್ಮದ ಕಥೆ ಹೇಳುವುದಾದರೆ, ರಾಜಾ ಬಲೀಂದ್ರನ ಮಗಳು ರತ್ನಮಾಲಾ. ರಾಜಾ ಬಲೀಂದ್ರ ರಾಕ್ಷಸ ರಾಜನಾಗಿದ್ದ. ಆದರೂ ಆತ ವಿಷ್ಣು ಭಕ್ತನಾಗಿದ್ದ. ವಿಷ್ಣು ಭಕ್ತಿ ಮಾಡುತ್ತಲೇ, ತ್ರಿಲೋಕಾಧಿಪತಿಯಾಗಬೇಕೆಂಬ ಆಸೆಯಲ್ಲಿ ರಾಜ ಬಲೀಂದ್ರ ಯುದ್ಧ, ಯಾಗಾದಿಗಳನ್ನು ಮಾಡಿ, ಕೊನೆಯ ಯಾಗ ಮಾಡಿ, ಅದರಲ್ಲಿ ಯಶಸ್ವಿಯಾದರೆ, ಬಲೀಂದ್ರನೇ ತ್ರಿಲೋಕಾಧಿಪಾತಿಯಾಗುತ್ತಿದ್ದ.

ಆದರೆ, ಆ ಕೊನೆಯ ಯಾಗವನ್ನು ತಡೆಯಲು ದೇವಾನುದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ. ಆಗ ವಿಷ್ಣು ವಾಮನನ ರೂಪ ಧರಿಸಿ, ಬಲೀಂದ್ರ ನಡೆಸುತ್ತಿದ್ದ ಯಾಗಕ್ಕೆ ಹೋಗುತ್ತಾನೆ. ಆತನನ್ನು ನೋಡಿದ ರತ್ನಮಾಲಾ, ಇಂಥ ಸುಂದರ ಮಗು ನನಗೂ ಇದ್ದಿದ್ದರೆ ಚೆಂದವಿತ್ತು ಎನ್ನುತ್ತಾಳೆ. ಆಗ ವಾಮನ ತಥಾಸ್ತು ಎನ್ನುತ್ತಾನೆ.

ಅದೇ ರೀತಿ ಯಾಗಕ್ಕಾಗಿ ಬಲೀಂದ್ರನ ಬಳಿ ವಾಮನ ಮೂರು ಪಾದದಳತೆಯಷ್ಟು ಭೂಮಿ ದಾನವಾಗಿ ಕೇಳುತ್ತಾನೆ. ಅದಕ್ಕೆ ಬಲೀಂದ್ರ ಖಂಡಿತವಾಗಿಯೂ ನೀಡುತ್ತೇನೆ ಎಂದಾಗ, ವಾಮನ ನಿಜರೂಪ ತಾಳಿ ತ್ರಿಲೋಕವನ್ನು ತನ್ನ ವಶಕ್ಕೆ ಪಡೆಯುತ್ತಾನೆ.

ಇದನ್ನು ಕಂಡು ರತ್ನಮಾಲಾಳಿಗೆ ಕೋಪ ಬರುತ್ತದೆ. ಆಗ ಆಕೆ ನನಗೇನಾದರೂ ಇಂಥ ಮಗನಿದ್ದಿದ್ದರೆ, ಆತನಿಗೆ ವಿಷ ಉಣಿಸುತ್ತಿದ್ದೆ ಎನ್ನುತ್ತಾಳೆ. ಆಗಲೂ ವಾಮನ ತಥಾಸ್ತು ಎನ್ನುತ್ತಾನೆ.

ಇದೇ ಕಾರಣಕ್ಕೆ ರತ್ನಮಾಲಾ ದ್ವಾಪರ ಯುಗದಲ್ಲಿ ಪೂತನಿಯಾಗಿ ರಾಕ್ಷಸಿ ರೂಪದಲ್ಲಿ ಜನಿಸಿ, ಕಂಸನ ಆಜ್ಞೆಯಂತೆ ಕೃಷ್ಣನನ್ನು ಎತ್ತಿ ಮುದ್ದಾಡುತ್ತಾಳೆ. ಬಳಿಕ ಸ್ತನಪಾನದ ಮೂಲಕ ವಿಷ ಉಣಿಸಲು ಪ್ರಯತ್ನಿಸಿ, ಶ್ರೀಕೃಷ್ಣನಿಂದ ಸಂಹರಿಸಲ್ಪಡುತ್ತಾಳೆ.

About The Author