Political News: ಬರ ತಾಲೂಕುಗಳ ಘೋಷಣೆಯಲ್ಲಿ ತಾರತಮ್ಯ ಆಗಿರುವ ಕುರಿತು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿಎಸ್ ಅಪ್ಪಾಜಿ ನಾಡಗೌಡ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದು, ಅಪ್ಪಾಜಿ ನಾಡಗೌಡ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿರುವುದು ಬರ ನಿರ್ವಹಣೆ ಮತ್ತು ರೈತರ ನೆರವಿಗೆ ಧಾವಿಸುವ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಹೇಗೆ ಬೇಕಾಬಿಟ್ಟಿ ವರ್ತನೆ ತೋರುತ್ತಿದೆ ಎಂಬುದನ್ನು ಖುಲ್ಲಂಖುಲ್ಲಾ ತೆರೆದಿಟ್ಟಿದೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿ ಆಗಿದೆ. ಆದ ಕಾರಣ ಎಲ್ಲ ವಿಚಾರಗಳಲ್ಲಿ ಕಾಂಗ್ರೆಸ್ ಸರಕಾರ ಪಾರದರ್ಶಕತೆಯನ್ನು ಗಾಳಿಗೆ ತೂರಿದೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಬರ ತಾಲೂಕುಗಳು 190ಕ್ಕಿಂತ ಹೆಚ್ಚಿದ್ದರೂ ಸರಕಾರ ಘೋಷಣೆ ಮಾಡಿರುವುದು 101 ತಾಲೂಕುಗಳು ಮಾತ್ರ ಎಂದು ಬಿಜೆಪಿ ಈಗಾಗಲೇ ಪ್ರಬಲ ಆಕ್ಷೇಪ ವ್ಯಕ್ತ ಮಾಡಿದೆ.
ಕಾಂಗ್ರೆಸ್ ಶಾಸಕ ಅಪ್ಪಾಜಿ ನಾಡಗೌಡ ಈಗ ಬಿಡುಗಡೆ ಮಾಡಿರುವ ಹೇಳಿಕೆ ಬಿಜೆಪಿ ಆರೋಪಕ್ಕೆ ಸ್ಪಷ್ಟ ಸಾಕ್ಷಿ ಮತ್ತು ಪುರಾವೆಯನ್ನು ಒದಗಿಸಿದೆ. ಸತ್ಯವನ್ನು ಒಪ್ಪಿಕೊಂಡು ತಪ್ಪು ತಿದ್ದಿಕೊಳ್ಳುವ ಬದಲು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ, ಶಾಸಕ ನಾಡಗೌಡ ಹೇಳಿಕೆಗೆ ಸ್ಪಷ್ಟೀಕರಣ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಹೇಳಿ ಸತ್ಯ ಮರೆಮಾಚುವ, ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡಿದ್ದಾರೆ. ಇದು ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ನಾಡಗೌಡ ಹೇಳಿಕೆ ಮತ್ತು ಸಚಿವ ಎಂಬಿ ಪಾಟೀಲರ ಪ್ರತಿ ಹೇಳಿಕೆ ಕಾಂಗ್ರೆಸ್ ಸರಕಾರದ ಹುಳುಕು ಮತ್ತು ಆಂತರಿಕ ಕಚ್ಚಾಟವನ್ನು ಬೀದಿ ರಂಪಾಟದ ಮಟ್ಟಕ್ಕೆ ತಂದಿದೆ. ನಿಮ್ಮೊಳಗಿನ ಪ್ರತಿಷ್ಠೆ ಕಾದಾಟ,ಆಟ ಮೇಲಾಟ ಏನಾದರೂ ಇರಲಿ.ಮೊದಲು ಬರ ನಿರ್ವಹಣೆ ಸೇರಿದಂತೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಡೆ ಗಮನ ಕೊಡಿ. ಅದಿಲ್ಲ ಎಂದರೆ ಈ ಸರಕಾರದ ವಿರುದ್ಧ ಜನರೇ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂಬುದರ ಅರಿವಿರಲಿ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




