ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ 100 ವರ್ಷದ ಸಂಭ್ರಮಾಚರಣೆ: ಹಾಲಿ ಸಿಎಂಗೆ ಸಲಹೆ ನೀಡಿದ ಮಾಜಿ ಸಿಎಂ

Political News: ನಿನ್ನೆಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ 100 ದಿನಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆಶಿಗೆ ಅಭಿನಂದನೆ ಕೋರಿದ್ದು, ಕೆಲವು ಸಲಹೆಗಳನ್ನು ನೀಡಿದ್ದಾರೆ. ಜತೆಗೆ ತಾವು ಸಿಎಂ ಆಗಿದ್ದಾಗ ಮಾಡಿದ ಸಾಧನೆಗಳನ್ನು ಹೇಳುವುದರ ಜತೆಗೆ ಬಿಜೆಪಿ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಇಂದಿಗೆ 100 ದಿನಗಳನ್ನು ಪೂರೈಸಿದ್ದಾರೆ. ಅದರ ಜ್ಞಾಪಕಾರ್ಥ ಇಂದು ಸಮಾರಂಭವನ್ನು ಸಹ ಆಯೋಜಿಸಲಾಗಿದೆ. 100 ದಿನಗಳು, ಇದೊಂದು ಸಂಭ್ರಮಾಚರಣೆ ಅಲ್ಲ. ಈ 100 ದಿನಗಳಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಜನರ ಮುಂದಿಡುವ ಒಂದು ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಈ ಸರ್ಕಾರ ನಿರ್ವಹಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಜನರು ಇಲ್ಲಿ ಮಾಲೀಕರು, ನಾವು ಜನರಿಗೆ ಏನು ವಾಗ್ದಾನಗಳನ್ನು ಕೊಟ್ಟಿದ್ದೇವೆ, ಆ ವಾಗ್ದಾನಗಳನ್ನು ಜಾರಿ ಮಾಡುತ್ತಿದ್ದೇವೆಯೋ? ಇಲ್ಲವೋ? ಎನ್ನುವುದು ಬಹಳ ಮುಖ್ಯ. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಸಮ ಸಮಾಜವನ್ನು ನಿರ್ಮಾಣ ಮಾಡಬೇಕು. ನಾವು ಸಮ ಸಮಾಜ ನಿರ್ಮಾಣ ಮಾಡದೆ ಹೋದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂಬ ಭಾವನೆಯನ್ನು ವ್ಯಕ್ತವಾಗುತ್ತದೆ.

ಯಾವುದೇ ಸರ್ಕಾರ ಜನರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯ. ಚುನಾವಣಾ ಪೂರ್ವದಲ್ಲಿ ಪಕ್ಷದ ಪರವಾಗಿ ನಾವೆಲ್ಲರೂ ಜನತೆಯ ಮುಂದೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಈ ವೇಳೆ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಒಂದು ವೇಳೆ ಜಾರಿ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದಿದ್ದರು. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇರುವುದಿಲ್ಲ ಎಂದು ಬಹಳ ಟೀಕೆಗಳನ್ನು ಮಾಡಿದ್ದರು. ಪ್ರಧಾನ ಮಂತ್ರಿ ಆದಿಯಾಗಿ ಎಲ್ಲರೂ ಕೂಡ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು.

ನಾನು ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿ 3 ವರ್ಷಕ್ಕೂ ಹೆಚ್ಚು ಕಾಲ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೆವು. ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಪ್ರತಿವರ್ಷ ಸುಮಾರು 52 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಅಷ್ಟೊಂದು ಹಣವನ್ನು ಭರಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. 52 ಸಾವಿರ ಕೋಟಿ ರೂ. ಹಣವನ್ನು ಸರ್ಕಾರವೇ ಭರಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ತಲುಪಿಸುವಂತ ಕೆಲಸವನ್ನು ಮಾಡಿತ್ತು ಎಂದು ತಮ್ಮ ಸರ್ಕಾರದ ಪರ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಸಮಾಜದಲ್ಲಿ ಇರುವಂತಹ ಎಲ್ಲ ಜಾತಿಯ ಬಡವರನ್ನು ಗುರುತಿಸಿ 5 ಗ್ಯಾರಂಟಿ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸವನ್ನು ಮಾಡಿದೆ. ಅದರ ಜೊತೆಗೆ ನಮ್ಮ ಪ್ರಣಾಳಿಕೆ ಮೂಲಕ ಇನ್ನೂ ಬೇರೆ ವಾಗ್ದಾನಗಳನ್ನು ಮಾಡಿದ್ದೆವು. ಅವುಗಳನ್ನು ಕೂಡ ಪೂರೈಸುವ ಕೆಲಸವನ್ನು ಮಾಡಿದ್ದೆವು. ಅಭಿವೃದ್ಧಿ ಕೆಲಸಗಳಿಗೆ ಕೂಡ ಹಣವನ್ನು ಒದಗಿಸುವ ಕೆಲಸವನ್ನು ಮಾಡಿದ್ದೇವೆ. ಅಭಿವೃದ್ಧಿ ಕೆಲಸಗಳು ಯಾವುದೂ ಕುಂಠಿತವಾಗಿಲ್ಲ ಎಂದು ಕಾಂಗ್ರೆಸ್ ಪರ ಸಿದ್ದರಾಮಯ್ಯ ಮಾತನಾಡಿದ್ದಾರೆ.

About The Author