ಉದ್ಯೋಗ ಬದಲಾವಣೆ ಅಥವಾ ಇನ್ಯಾವುದೇ ಕಾರಣಕ್ಕೆ ಆಗಾಗ್ಗೆ ಮನೆ ಬದಲಾಯಿಸುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ ಹೊಸ ಮನೆಗೆ ಹೋದಾಗ ಆಧಾರ್ ಕಾರ್ಡ್ನಿಂದ ಹಿಡಿದು ಗ್ಯಾಸ್ ಕನೆಕ್ಷನ್ ವರೆಗೆ ಎಲ್ಲದರಲ್ಲೂ ವಿಳಾಸ ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಡೆಲಿವರಿಯಲ್ಲಿ ಅನಗತ್ಯ ಸಮಸ್ಯೆ ಎದುರಾಗುತ್ತದೆ. ಹೌದು, ಹೊಸ ಗ್ಯಾಸ್ ಕನೆಕ್ಷನ್ ಪಡೆಯುವ ಬದಲು ಇರುವ ಕನೆಕ್ಷನ್ ವಿಳಾಸವನ್ನೇ ಸುಲಭವಾಗಿ ಬದಲಾಯಿಸಿಕೊಳ್ಳಬಹುದು.
ವಿಳಾಸ ಬದಲಾವಣೆ ಅಥವಾ ವರ್ಗಾವಣೆ ಮಾಡಲು ಪ್ರಮುಖವಾಗಿ ಆಧಾರ್ ಕಾರ್ಡ್, ಹೊಸ ಮನೆಯ ವಿಳಾಸದ ಪುರಾವೆ ಅಂದರೆ ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ, ಗ್ಯಾಸ್ ಬುಕ್ ಮತ್ತು ಸಬ್ಸ್ಕ್ರಿಪ್ಶನ್ ವೋಚರ್ ಅಗತ್ಯವಿರುತ್ತದೆ.
ನೀವು ಒಂದೇ ನಗರದ ಒಳಗೆ ಬೇರೆಡೆಗೆ ಮನೆ ಬದಲಾಯಿಸುತ್ತಿದ್ದರೆ, ಮೊದಲು ಈಗ ಗ್ಯಾಸ್ ನೀಡುತ್ತಿರುವ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ‘Transfer Termination Voucher’ ಪಡೆದುಕೊಳ್ಳಬೇಕು. ಬಳಿಕ ನಿಮ್ಮ ಹೊಸ ವಿಳಾಸದ ವ್ಯಾಪ್ತಿಗೆ ಬರುವ ಗ್ಯಾಸ್ ಏಜೆನ್ಸಿಗೆ ಈ ವೋಚರ್ ಹಾಗೂ KYC ದಾಖಲೆಗಳನ್ನು ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಗ್ಯಾಸ್ ಕನೆಕ್ಷನ್ ಹೊಸ ವಿಳಾಸಕ್ಕೆ ವರ್ಗಾವಣೆಯಾಗುತ್ತದೆ.
ಒಂದು ವೇಳೆ ನೀವು ಬೇರೆ ನಗರಕ್ಕೇ ಶಾಶ್ವತವಾಗಿ ಸ್ಥಳಾಂತರಗೊಳ್ಳುತ್ತಿದ್ದರೆ, ನಿಮ್ಮ ಹಳೆಯ ಸಿಲಿಂಡರ್ ಮತ್ತು ಪ್ರೆಶರ್ ರೆಗ್ಯುಲೇಟರ್ ಅನ್ನು ಏಜೆನ್ಸಿಗೆ ಹಿಂದಿರುಗಿಸಿ ಡೆಪಾಸಿಟ್ ಹಣ ಪಡೆದುಕೊಳ್ಳಬೇಕು. ಇದರೊಂದಿಗೆ ಸಿಗುವ ಟರ್ಮಿನೇಷನ್ ವೋಚರ್ ಬಳಸಿ, ಹೊಸ ನಗರದ ಗ್ಯಾಸ್ ಏಜೆನ್ಸಿಯಲ್ಲಿ ಹೊಸ ಕನೆಕ್ಷನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇನ್ನು ಎಲ್ಪಿಜಿ ಬದಲು PNG ಅಂದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್ ಪಡೆಯಲು ಬಯಸುವವರು, ಹಳೆಯ ಗ್ಯಾಸ್ ಸಿಲಿಂಡರ್ಗಳನ್ನು ಸರೆಂಡರ್ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.




