Hubli: ಛಬ್ಬಿ ಸಿಂಧೂರ ಗಣಪತಿಗೆ 200 ವರ್ಷದ ಸಂಭ್ರಮ: ಇಷ್ಟಾರ್ಥ ಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

Hubli News: ಉತ್ತರ ಕರ್ನಾಟಕದ ಮನೆ ಮನೆಗೂ ಪರಿಚಿತವಾಗಿರುವ ಛಬ್ಬಿ ಗಣಪತಿಯ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು. 21 ಇಂಚಿನ ಸಿಂಧೂರ ವರ್ಣದ ಗಣಪತಿ, ಕುಲಕರ್ಣಿ ಮನೆತನದ 200 ವರ್ಷಗಳ ಪರಂಪರೆ ಹಾಗೂ ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ನಂಬಿಕೆಯ ಹಿನ್ನೆಲೆ… ಛಬ್ಬಿ ಗಣಪತಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ 200ನೇ ವರ್ಷದ ಸಂಭ್ರಮದಲ್ಲಿರುವ ಛಬ್ಬಿ ಗಣಪತಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಹೇಗಿದೆ ಈ ಭಕ್ತಿಯ ವೈಭವ..? ತೋರಿಸ್ತೀವಿ ನೋಡಿ…

ಉತ್ತರ ಕರ್ನಾಟಕದ ಜನರ ನಂಬಿಕೆ ಹಾಗೂ ಭಕ್ತಿಯ ಕೇಂದ್ರವಾಗಿರುವುದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ. ಇಲ್ಲಿನ ಸಿಂಧೂರ ವರ್ಣದ ಗಣಪತಿಯ ದರ್ಶನಕ್ಕೆ ಗಣೇಶೋತ್ಸವ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಎರಡು ಶತಮಾನಗಳ ಪರಂಪರೆ ಹೊಂದಿರುವ ಈ ಗಣಪತಿಯ ಆರಾಧನೆ ಈ ಬಾರಿ ಮತ್ತಷ್ಟು ವಿಶೇಷವಾಗಿದೆ.

ಛಬ್ಬಿಯ ಕುಲಕರ್ಣಿ ಮನೆತನಗಳಲ್ಲಿ ಪ್ರತಿಷ್ಠಾಪನೆಯಾಗುವ ಈ ಗಣಪತಿ ಬರೋಬ್ಬರಿ 21 ಇಂಚಿನ ಸಿಂಧೂರ ವರ್ಣದ ಮೂರ್ತಿ. ಕುಲಕರ್ಣಿ ಕುಟುಂಬದ ಏಳು ಮನೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಗಣೇಶೋತ್ಸವದಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ.

ಛಬ್ಬಿ ಗಣಪತಿಯ ಇತಿಹಾಸದ ಹಿಂದೆ ಒಂದು ವಿಶೇಷ ನಂಬಿಕೆಯ ಕಥೆಯೂ ಇದೆ. ಛಬ್ಬಿಯ ತಮ್ಮಪ್ಪ ಕುಲಕರ್ಣಿ ಅವರಿಗೆ ಸಂತಾನ ಭಾಗ್ಯ ಇರಲಿಲ್ಲ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಛಬ್ಬಿ ಗ್ರಾಮಕ್ಕೆ ಆಗಮಿಸಿದ್ದ ಕೃಷ್ಣೇಂದ್ರ ಸ್ವಾಮೀಜಿಗಳು ಗಣೇಶೋತ್ಸವ ಆಚರಿಸುವಂತೆ ಸಲಹೆ ನೀಡಿದ್ದರೆಂಬುದು ಕುಲಕರ್ಣಿ ಕುಟುಂಬದ ನಂಬಿಕೆ.

ಅದರಂತೆ ವರಸಿದ್ಧಿ ವಿನಾಯಕ ಗಣಪತಿಯನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಆರಂಭಿಸಿದ ಬಳಿಕ, ವರ್ಷದೊಳಗೆ ಕುಲಕರ್ಣಿ ಕುಟುಂಬದಲ್ಲಿ ಗಂಡು ಮಗು ಜನಿಸಿತು ಎನ್ನಲಾಗುತ್ತದೆ. ಈ ಘಟನೆ ಬಳಿಕ ಆರಂಭವಾದ ಗಣೇಶೋತ್ಸವದ ಪರಂಪರೆ ಇಂದಿಗೂ ನಿರಂತರವಾಗಿ ಮುಂದುವರಿದಿದೆ. ಇದೇ ಕಾರಣಕ್ಕೆ ಛಬ್ಬಿ ಗಣಪತಿಯ ಬಗ್ಗೆ ಭಕ್ತರಲ್ಲಿ ವಿಶೇಷ ನಂಬಿಕೆ ಬೆಳೆದಿದೆ.

ಇನ್ನು ಛಬ್ಬಿ ಗಣಪತಿಯ ಮತ್ತೊಂದು ವಿಶೇಷತೆ ಎಂದರೆ ಮೂರ್ತಿಯ ವಿಶಿಷ್ಟ ರೂಪ. ಒಂದು ಕೈಯಲ್ಲಿ ತುಂಡಾದ ಹಲ್ಲು… ಮತ್ತೊಂದು ಕೈಯಲ್ಲಿ ಲಿಂಗ… ಇನ್ನೊಂದು ಕೈಯಲ್ಲಿ ಕೊಡಲಿ… ಮತ್ತೊಂದು ಕೈಯಲ್ಲಿ ತ್ರಿಶೂಲ… ಸಿಂಧೂರ ಮೈಬಣ್ಣದ ಈ ವಿಶಿಷ್ಟ ವಿನಾಯಕನ ದರ್ಶನಕ್ಕಾಗಿ ಭಕ್ತರು ಕಾತರರಾಗಿರುತ್ತಾರೆ.

ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಬಂದು ಗಣಪತಿಗೆ ಪೂಜೆ ಸಲ್ಲಿಸುತ್ತಾರೆ. ಆರೋಗ್ಯ, ಸಂತಾನ, ಕುಟುಂಬದ ನೆಮ್ಮದಿ ಹಾಗೂ ವಿವಿಧ ಹರಕೆಗಳನ್ನು ಹೊತ್ತು ಬರುವ ಭಕ್ತರು ಸಿಂಧೂರ ಗಣಪತಿಗೆ ನಮಿಸಿ ತಮ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ನೆರೆ ರಾಜ್ಯಗಳಿಂದಲೂ ಭಕ್ತರು ಛಬ್ಬಿಗೆ ಆಗಮಿಸುತ್ತಿದ್ದಾರೆ. ಗಣಪತಿಯ ದರ್ಶನ ಪಡೆದು, ಸಿಂಧೂರ ಅರ್ಪಿಸಿ, ಆರತಿ ಬೆಳಗಿ, ಹರಕೆ ತೀರಿಸುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. 200ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ಉತ್ಸಾಹವೂ ಮತ್ತಷ್ಟು ಹೆಚ್ಚಾಗಿದೆ.

ಎರಡು ಶತಮಾನಗಳ ಇತಿಹಾಸ… 21 ಇಂಚಿನ ವಿಶಿಷ್ಟ ಸಿಂಧೂರ ಗಣಪತಿ… ಕುಲಕರ್ಣಿ ಮನೆತನದ ನಿರಂತರ ಪರಂಪರೆ… ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಭಕ್ತರ ಅಪಾರ ನಂಬಿಕೆ… ಇವೆಲ್ಲವೂ ಛಬ್ಬಿ ಗಣಪತಿಯನ್ನು ವಿಶೇಷವಾಗಿಸಿವೆ.

200ನೇ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಛಬ್ಬಿ ಗ್ರಾಮದಲ್ಲಿ ಭಕ್ತಿಯೇ ಮನೆ ಮಾಡಿದ್ದು, ದೂರದ ಊರುಗಳಿಂದ ಆಗಮಿಸುತ್ತಿರುವ ಭಕ್ತರು ಇಷ್ಟಾರ್ಥ ಸಿದ್ಧಿ ವಿನಾಯಕನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ

About The Author