Political News: ಸಿಎಂ ಡಿ.ಕೆ.ಶಿವಕುಮಾರ್ ಮನಸ್ಸು ಮಾಡಿದ್ರೆ, ತಮ್ಮ ಸ್ವಂತ ಹಣದಿಂದ ರೈತರ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದರ ವಿರುದ್ಧ ಸಚಿವ ಬಾಲಕೃಷ್ಣ ಕಿಡಿಕಾರಿದ್ದಾರೆ.
ನೆಲಮಂಗಲದಲ್ಲಿ ಮಾಧ್ಯಮದವರ ಜತೆ ಮಾತನಾಡಿರುವ ಬಾಲಕೃಷ್ಣ, ಹೆಚ್ಡಿಕೆ ಅವರ ಹೇಳಿಕೆಯನ್ನು ನಾವು ಸ್ವೀಕಾರ ಮಾಡಿದ್ದೇವೆ. ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೇವೆ. ನಾವು ಶೇರ್ ನೀಡ್ತೀವಿ. ಅವರು ಶೇರ್ ನೀಡಲಿ. ಅವರು ಚೆನ್ನಾಗಿ ಸಂಪಾದನೆ ಮಾಡಿದ್ದಾರಲ್ಲಾ.. ಅವರ ಆಸ್ತಿಯಲ್ಲೂ ಪಾಲು ನೀಡಲಿ. ಎಲ್ಲರೂ ಸೇರಿ ರೈತರ ಸಾಲ ತೀರಿಸೋಣ ಎಂದು ಬಾಲಕೃಷ್ಣ ಹೆಚ್ಡಿಕೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಅಲ್ಲದೇ, ಮಾತನಾಡಬೇಕು ಅಂತಾ ಮಾತಾಡೋದಲ್ಲಾ. ಸರಿಯಾಗಿ ಮಾತಾಡಬೇಕು ಎಂದು ಬಾಲಕೃಷ್ಣ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ರಿಯಲ್ ಎಸ್ಟೇಟ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕೃಷ್ಣ, ಎಲ್ಲರೂ ರಿಯಲ್ ಎಸ್ಟೇಟ್ ಮಾಡಿರುವವರೇ ಯಾರೂ ಸತ್ಯ ಹರಿಶ್ಚಂದ್ರರಲ್ಲ. ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ.
ಅಲ್ಲದೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಅಗತ್ಯವಿರಲಿಲ್ಲ ಎಂಬ ವಿಪಕ್ಷದವರ ಹೇಳಿಕೆಗೆ ತಿರುಗೇಟು ನೀಡಿರುವ ಬಾಲಕೃಷ್ಣ, ಯಾವ ಸಿಎಂ ಹೋಗಿ ಮಂಗಳೂರಿನಲ್ಲಿ ಸಭೆ ಮಾಡಿದ್ದರು..? ಯಾರೂ ಮಾಡಿರಲಿಲ್ಲ. ನಾವು ಮಾಡಿದ್ದೇವೆ. ರಾಜ್ಯದ 2ನೇ ಹೆಚ್ಚುವರಿ ಭಾಷೆಯಾಗಿ ತುಳು ಭಾಷೆಗೆ ಗೌರವ ನೀಡಬೇಕು ಎಂದು ಹಲವು ವರ್ಷಗಳ ಬೇಡಿಕೆ ಇತ್ತು. ಅದನ್ನು ಈ ಬಾರಿ ನಮ್ಮ ಸರ್ಕಾರ ಘೋಷಿಸಿದೆ ಎಂದು ತಮ್ಮ ಸರ್ಕಾರದ ಪರ ಬಾಲಕೃಷ್ಣ ಬ್ಯಾಟ್ ಬೀಸಿದ್ದಾರೆ.




