Political News: ‘ವಂದೇ ಮಾತರಂ’ ಬಗ್ಗೆ ಸುಪ್ರೀಂ ನೀಡಿದ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್

Political News: ‘ವಂದೇ ಮಾತರಂ’ ಹಾಡದಿದ್ದರೆ ಶಿಕ್ಷೆ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಲ್ಲದೇ, ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹರಿಪ್ರಸಾದ್, ‘ವಂದೇ ಮಾತರಂ’ ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ಯಾರಾದರೂ ಹಾಡಲು ನಿರಾಕರಿಸಿದರೆ ಅವರನ್ನು ಕ್ರಿಮಿನಲ್ ಕ್ರಮಕ್ಕೆ ಒಳಪಡಿಸಬಾರದು ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿದೆ. ಇದು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಎಷ್ಟು ಗಟ್ಟಿಯಾಗಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ದೇಶದ ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ದೇಶಭಕ್ತಿ ಎನ್ನುವುದು ಯಾರನ್ನಾದರೂ ಒಂದು ಹಾಡನ್ನು ಕಡ್ಡಾಯವಾಗಿ ಹಾಡುವಂತೆ ಒತ್ತಾಯಿಸುವುದರಲ್ಲಿ ಇಲ್ಲ. ದೇಶಭಕ್ತಿ ಎಂದರೆ ಸಂವಿಧಾನವನ್ನು ಗೌರವಿಸುವುದು, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವುದೂ ಹೌದು ಎಂದು ಹರಿಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ವಂದೇ ಮಾತರಂ ಕುರಿತು ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಗೌರವಿಸುವ ಮಾರ್ಗವನ್ನು ರೂಪಿಸಿದ್ದರು. ಆ ಐತಿಹಾಸಿಕ ಒಮ್ಮತವನ್ನು ಬದಿಗಿಟ್ಟು, ಸಂಪೂರ್ಣ ಆರು ಚರಣಗಳನ್ನು ಅಧಿಕೃತವಾಗಿ ಹಾಡಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜನರ ಮೇಲೆ ಹೇರಿಕೆ ಮಾಡಿದೆ.

ವಂದೇ ಮಾತರಂ ಹಾಡುವುದನ್ನು ಯಾರು ವಿರೋಧಿಸುತ್ತಿಲ್ಲ. ಆದರೆ ಹಾಡನ್ನು ಗೌರವಿಸುವ ಹೆಸರಿನಲ್ಲಿ ಸಂವಿಧಾನವನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ. ದೇಶಭಕ್ತಿಯ ಪ್ರಮಾಣಪತ್ರವನ್ನು ಬಿಜೆಪಿಯವರಿಂದ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಈ ದೇಶದಲ್ಲಿಲ್ಲ. ದೇಶವನ್ನು ಪ್ರೀತಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುವಂತೆ, ತನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಹಕ್ಕು ಕೂಡ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಆದರೆ ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ನಡೆದ ಘಟನೆ ಮಾತ್ರ ಬಿಜೆಪಿಯವರ ರಾಜಕೀಯ ನಿಲುವಿನ ಅಸ್ಪಷ್ಟತೆಯನ್ನು ಬಯಲಿಗೆಳೆದಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪೂರ್ಣ ‘ವಂದೇ ಮಾತರಂ’ ಹಾಡಲು ಮುಂದಾದರು. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಎರಡು ಚರಣಗಳ ನಂತರ ನಿಂತು ಸಂವಿಧಾನದ ಪೀಠಿಕೆಯನ್ನು ಓದಿದಾಗ, ಪ್ರತಿಪಕ್ಷದ ಸದಸ್ಯರು ಪೂರ್ಣ ಹಾಡನ್ನು ಮುಂದುವರಿಸಿದರು.

ವಂದೇ ಮಾತರಂ ಹಾಡಲುಬಾರದ ಬಿಜೆಪಿಗರು ಮುದ್ರಿತ ಪ್ರತಿಗಳನ್ನು ಹಿಡಿದು ಹಾಡಿದರು. ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲೇಬೇಕು ಎಂದು ವಿಧಾನಸಭೆಯಲ್ಲಿ ಇಷ್ಟೊಂದು ದೊಡ್ಡ ರಾಜಕೀಯ ಹೋರಾಟ ಮಾಡುವ ಬಿಜೆಪಿಯವರಿಗೆ ಹಾಡಿನ ಸಂಪೂರ್ಣ ಸಾಹಿತ್ಯವೇ ಬಾಯಿಪಾಠವಾಗಿಲ್ಲ ಎನ್ನುವುದು ವಿಪರ್ಯಾಸ. ಬಾಯಿಪಾಠ ಬರದಿದ್ದರೂ ಪರವಾಗಿಲ್ಲ, ಕನಿಷ್ಠ ಸರಿಯಾಗಿ ಓದಿ ಹಾಡಲೂ ನಾಲಗೆ ಹೊರಳದಿರುವುದು ಇನ್ನೂ ದೊಡ್ಡ ವಿಪರ್ಯಾಸ ಎಂದು ಹರಿಪ್ರಸಾದ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಒಂದು ಹಾಡನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು, ಅದೇ ಹಾಡನ್ನು ಸರಿಯಾಗಿ ಹಾಡಲು ಸಾಧ್ಯವಾಗದಿರುವುದಕ್ಕಿಂತ ರಾಜಕೀಯ ದೊಡ್ಡ ವೈರುಧ್ಯ ಮತ್ತೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರಿಂ ಕೋರ್ಟ್ ನ ಈ ಅದೇಶದಿಂದಾಗಿ, ವಂದೇ ಮಾತರಂ ಹಾಡಲು ಬಾರದ ಬಿಜೆಪಿಗರು ಇದೀಗ ಕನಿಷ್ಠ ಒಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು ನನಗಂತೂ ಸಮಾಧಾನ ತಂದಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

About The Author