ಹಬ್ಬದ ಸೀಸನ್‌ಗೆ ಗುಡ್‌ನ್ಯೂಸ್ – ಅಡುಗೆ ಎಣ್ಣೆ ಬೆಲೆ ಇಳಿಕೆ!

ಹಬ್ಬದ ಸೀಸನ್‌ನಲ್ಲಿ ಅಡುಗೆ ಎಣ್ಣೆ ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆಯಾಗಿರುವ ನಡುವೆಯೂ, ದೇಶೀಯ ಗ್ರಾಹಕರಿಗೆ ರಿಲೀಫ್ ನೀಡಲು ಕೇಂದ್ರ ಸರ್ಕಾರ ಕಚ್ಚಾ ಅಡುಗೆ ಎಣ್ಣೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿದೆ. ಅಷ್ಟೇ ಅಲ್ಲದೆ, ಇದರ ಸಂಪೂರ್ಣ ಲಾಭವನ್ನು ತಕ್ಷಣವೇ ಗ್ರಾಹಕರಿಗೆ ತಲುಪಿಸುವಂತೆ ಉದ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೆಪ್ಟೆಂಬರ್ 24ರಿಂದಲೇ ಹೊಸ ಸುಂಕ ದರಗಳು ಜಾರಿಗೆ ಬಂದಿದ್ದು, ಯಾವ ಎಣ್ಣೆಗೆ ಎಷ್ಟು ಸುಂಕ ಕಡಿತವಾಗಿದೆ ಎಂದು ಈಗ ನೋಡೋಣ ಬನ್ನಿ. ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 10ರಿಂದ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಕಚ್ಚಾ ಸೋಯಾಬೀನ್ ಮತ್ತು ಕಚ್ಚಾ ಪಾಮ್ ಎಣ್ಣೆಯ ಸುಂಕವನ್ನು ಶೇ. 10ರಿಂದ ಶೇ. 5ಕ್ಕೆ ಕಡಿತಗೊಳಿಸಲಾಗಿದೆ. ಅದೇ ರೀತಿ, ಸಂಸ್ಕರಿಸಿದ ಸೋಯಾಬೀನ್ ಮತ್ತು ಪಾಮ್ ಎಣ್ಣೆಯ ಸುಂಕವನ್ನು ಶೇ. 32.5ರಿಂದ ಶೇ. 27.5ಕ್ಕೆ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಸುಂಕವನ್ನು ಶೇ. 22.5ಕ್ಕೆ ಇಳಿಸಲಾಗಿದೆ.

ದೇಶೀಯ ರಿಫೈನಿಂಗ್ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕಚ್ಚಾ ಮತ್ತು ಸಂಸ್ಕರಿಸಿದ ಎಣ್ಣೆಗಳ ನಡುವಿನ ಸುಂಕದ ವ್ಯತ್ಯಾಸವನ್ನು ಕಾಯ್ದುಕೊಳ್ಳಲಾಗಿದೆ. ಆಮದು ಸುಂಕ ಕಡಿತದಿಂದ ದೊರೆಯುವ ಪ್ರಯೋಜನ ನೇರವಾಗಿ ಗ್ರಾಹಕರಿಗೆ ತಲುಪಬೇಕು ಎಂದು ಸೂಚಿಸಿರುವ ಕೇಂದ್ರ ಸರ್ಕಾರ, ಕಡಿಮೆಯಾದ ಆಮದು ವೆಚ್ಚಕ್ಕೆ ಅನುಗುಣವಾಗಿ ಡೀಲರ್ ಬೆಲೆ ಹಾಗೂ ಗರಿಷ್ಠ ಚಿಲ್ಲರೆ ಬೆಲೆಯನ್ನು ತಕ್ಷಣವೇ ಪರಿಷ್ಕರಿಸುವಂತೆ ನಿರ್ದೇಶನ ನೀಡಿದೆ. ಹಬ್ಬದ ಈ ಸಮಯದಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿಂದ ಗ್ರಾಹಕರು ನಿರಾಳರಾಗಿದ್ದಾರೆ ಎಂದು ಹೇಳಬಹುದು.

About The Author