Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು ಸದ್ಯ ನಿಷೇಧಿಸಲಾಗಿದೆ. ಏಕೆಂದರೆ, ಉತ್ತರ ಭಾರತದ ಹಲವೆಡೆ ಗಾಳಿಪಟ ಹಾರಿಸುವಾಗ ಮಾಂಜಾದಾರ ಬಳಸಿ, ಎಷ್ಟೋ ಜನರ ಕುತ್ತಿಗೆ ಕಡಿದು ಸಾವಾಗಿದೆ. ಹಾಗಾಗಿ ಮಾಂಜಾ ದಾರವನ್ನು ಬ್ಯಾನ್ ಮಾಡಲಾಗಿದೆ.
ಆದರೂ ಕೆಲವರು ಮಾಂಜಾ ದಾರ ಬಳಸಿಯೇ ಗಾಳಿಪಟ ತಯಾರಿಸಿ, ಆಡುತ್ತಾರೆ. ಇಂಥವರಿಂದ ಇಂದು ಬೆಳಗಾವಿಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಬೆಳಗಾವಿಯಲ್ಲಿ ಅಜ್ಜಿಯ ಜತೆ ವಾಸಿಸುತ್ತ, ವಿದ್ಯಾಭ್ಯಾಸವನ್ನು ಮಾಡುತ್ತ. ಜತೆಗೆ ತನ್ನ ಖರ್ಚಿಗಾಗಿ ರಾತ್ರಿ ವೇಳೆ ವೃದ್ಧಾಶ್ರಮದಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಮಾಂಜಾ ದಾರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
19 ವರ್ಷದ ಧ್ರುವ ಕರ್ಜಗಿ ಎಂಬಾತ ಸಾವನ್ನಪ್ಪಿದ ಯುವಕನಾಗಿದ್ದು, ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಬೇರೆಯವರು ಗಾಳಿಪಟ ಹಾರಿಸುವಾಗ, ದಾರ ಧ್ರುವನ ಕತ್ತಿಗೆ ತಾಗಿ ಈ ದುರಂತ ಸಂಭವಿಸಿದೆ.
ಧ್ರುವನ ತಂದೆ ತಾಯಿ ಬೆಂಗಳೂರಿನಲ್ಲಿ ಇದ್ದು, ಬೆಳಗಾವಿಯಲ್ಲಿ ಧ್ರುವ ಅಜ್ಜಿಯ ಜತೆ ವಾಸಿಸುತ್ತ ವಿದ್ಯಾಭ್ಯಾಸ ಮಾಡುತ್ತಿದ್ದ. ಅಲ್ಲದೇ ಕೇರ್ ಟೇಕರ್ ಆಗಿಯೂ ಕೆಲಸ ಮಾಡುತ್ತಿದ್ದ. ಘಟನೆಯಿಂದ ಮನೆಜನರ ಆಕ್ರಂದನ ಮುಗಿಲು ಮುಟ್ಟಿದೆ.




