Haveri News: ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಗಡಿ ಮಠದ ಗುರುಲಿಂಗ ಸ್ವಾಮೀಜಿ ರೈತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ.
ರೈತರಿಗೆ ನೀರು, ಕರೆಂಟ್ ಸರಿಯಾದ ಸಮಯಕ್ಕೆ ಕೊಡಿ. ಸರಕಾರಕ್ಕೆ ರೈತರು ಸಾಲ ಕೊಡುವಂತಹ ತಾಕತ್ತು ಇದೆ. ರೈತರೇ ಶ್ರೀಮಂತರಾದ್ರೆ ನಮಗ ಕಷ್ಟ ಅನ್ನೋ ಭಾವನೆ ಬಂದಿದೆ ಎಂದು ಸರ್ಕಾರದ ಬಗ್ಗೆ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ರೈತರ ವಿವಾಹದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಶ್ರೀಗಳು, ಬರೀ ನೌಕರಿ ಅಂತಾ ನೌಕರಿ ಇದ್ದವರಿಗೆ ಹೆಣ್ಣು ಕೊಡಬೇಡಿ. ನಮ್ಮ ರೈತರ ಮಕ್ಕಳಿಗೂ ಕನ್ಯಾ ಕೊಡಿ, ರೈತ ಕುಟುಂಬಗಳನ್ನ ಗೌರವಿಸಿ. ನೌಕರಿಗೆ ಟ್ರಾನ್ಸ್‌ಫರ್ ಇದೆ, ಡಿವೋರ್ಸ್ ಯಾವಾಗ ಆಗುತ್ತೋ ಗೊತ್ತಿಲ್ಲ. ಆದ್ರೆ ರೈತ ಯಾವತ್ತಿಗೂ ಟ್ರಾನ್ಸ್‌ಫರ್ ಆಗಲ್ಲ. ಟ್ರಾನ್ಸ್‌ಫರ್ ಆಗೋರಿಗೂ ಅನ್ನ ಹಾಕೋದು ರೈತನೇ. ರೈತರಿಗೆ ಕನ್ಯಾ ಕೊಡುವ ಉದಾರತೆ ತಾಯಂದಿರಲ್ಲಿ ಬರಬೇಕು. ಹೊಲ ಇರೋ ಹುಡುಗ ಬೇಕು, ಆದ್ರೆ ಹೊಲದಲ್ಲಿ ಕೆಲಸ ಮಾಡಬಾರದು. ಹುಡುಗನ ಮನೆಯಲ್ಲಿ ಅವ್ವ ಇರಬಾರದು ಅನ್ನೋ ಕಂಡಿಷನ್ ಹಾಕ್ತಾರೆ. ಪ್ರವಚನ ಮಾಡೋದನ್ನ ಬಿಟ್ಟು ಕನ್ಯೆ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಕನ್ಹೇರಿ ಮಠದ ಶ್ರೀಗಳು ಭಾಷಣಗಳಲ್ಲಿ ರೈತರ ಮದುವೆ ವಿಚಾರ ಪ್ರಸ್ತಾಪಿಸಲಿ. ಈ ಭಾಗದಲ್ಲೂ ಆದರ್ಶ ಗೋಶಾಲೆ ನಿರ್ಮಾಣ ಆಗಬೇಕಿದೆ. ಕನ್ಹೇರಿ ಮಠದಿಂದ ದೇಶದಲ್ಲೇ ಅತ್ಯಂತ ದೊಡ್ಡ ಗೋಶಾಲೆ ನಿರ್ಮಾಣವಾಗಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.




