ಸಿಕ್ಕಸಿಕ್ಕಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ಹಂಚಿಕೊಳ್ಳುವವರೇ ಎಚ್ಚರ! ಹೌದು, ನಿಮ್ಮ ಈ ಸಣ್ಣ ಅಜಾಗರೂಕತೆ ನಿಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ಸೈಬರ್ ವಂಚಕರು ನಿಮ್ಮ ಆಧಾರ್ ಜೆರಾಕ್ಸ್ ಪ್ರತಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಸಿಮ್ ಕಾರ್ಡ್ ಪಡೆಯುವುದು ಅಥವಾ ಬ್ಯಾಂಕ್ ಖಾತೆ ಖಾಲಿ ಮಾಡುವ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆ ನೀಡಿದೆ.
ಹಾಗಾದರೆ ಇದಕ್ಕೆ ಮುನ್ನೆಚ್ಚರಿಕೆ ಏನು? ಯಾವುದೇ ಸಾಮಾನ್ಯ ಅಗತ್ಯಗಳಿಗಾಗಿ ಗುರುತಿನ ಪುರಾವೆ ನೀಡುವಾಗ, ಸಾಮಾನ್ಯ ಆಧಾರ್ ಜೆರಾಕ್ಸ್ ಬದಲಿಗೆ ‘ಮಾಸ್ಕ್ಡ್ ಆಧಾರ್ ಕಾರ್ಡ್’ ಬಳಸುವುದನ್ನು ರೂಢಿಸಿಕೊಳ್ಳಿ. ಇದರಲ್ಲಿ ನಿಮ್ಮ ಆಧಾರ್ನ ಮೊದಲ ಎಂಟು ಅಂಕಿಗಳು ಮರೆಯಾಗಿ, ಕೊನೆಯ ನಾಲ್ಕು ಅಂಕಿಗಳು ಮಾತ್ರ ಗೋಚರಿಸುತ್ತವೆ. ಇದರಿಂದ ನಿಮ್ಮ ವೈಯಕ್ತಿಕ ವಿವರಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ.
ಅನಿವಾರ್ಯ ಸಂದರ್ಭಗಳಲ್ಲಿ ಮೂಲ ಆಧಾರ್ ಪ್ರತಿಯನ್ನೇ ನೀಡಬೇಕಾದರೆ, ಅದರ ಮೇಲೆ ನೀಲಿ ಅಥವಾ ಕಪ್ಪು ಪೆನ್ನಿನಿಂದ ಅಡ್ಡ ಗೆರೆ ಎಳೆದು, ಅದರ ನಿರ್ದಿಷ್ಟ ಬಳಕೆಯ ಉದ್ದೇಶವನ್ನು ಕಡ್ಡಾಯವಾಗಿ ನಮೂದಿಸಿ. ಉದಾಹರಣೆಗೆ, ‘ಕೇವಲ ಸಿಮ್ ಕಾರ್ಡ್ ಪರಿಶೀಲನೆಗೆ ಮಾತ್ರ’ ಎಂದು ಬರೆದು ಜೊತೆಗೆ ದಿನಾಂಕವನ್ನು ಹಾಕಿದರೆ, ಆ ಪ್ರತಿಯನ್ನು ಬೇರೆ ಯಾವುದೇ ಅನಧಿಕೃತ ಕೆಲಸಕ್ಕೆ ಬಳಸಲು ಸಾಧ್ಯವಿಲ್ಲ.
ಇದಲ್ಲದೆ, ನಿಮ್ಮ ಆಧಾರ್ ಮಾಹಿತಿಯನ್ನು ದುರ್ಬಳಕೆಯಿಂದ ಕಾಪಾಡಲು ಬಯೋಮೆಟ್ರಿಕ್ ಲಾಕಿಂಗ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಯುಐಡಿಎಐ ಅಧಿಕೃತ ವೆಬ್ಸೈಟ್ ಅಥವಾ ಎಂ-ಆಧಾರ್ ಆ್ಯಪ್ ಮೂಲಕ ನಿಮ್ಮ ಬೆರಳಚ್ಚು ಹಾಗೂ ಕಣ್ಣಿನ ಪಾಪೆಯ ವಿವರಗಳನ್ನು ಲಾಕ್ ಮಾಡಿಕೊಳ್ಳಿ. ಅಗತ್ಯವಿದ್ದಾಗ ಮಾತ್ರ ಇದನ್ನು ಅನ್ಲಾಕ್ ಮಾಡಿಕೊಳ್ಳುವ ಸೌಲಭ್ಯವಿದ್ದು, ಇದು ವಂಚನೆಗಳನ್ನು ದೊಡ್ಡ ಮಟ್ಟದಲ್ಲಿ ತಡೆಯುತ್ತದೆ.
ಕೊನೆಯದಾಗಿ, ನಿಮ್ಮ ಆಧಾರ್ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಟ್ಟುಕೊಳ್ಳಿ ಮತ್ತು ಕಾಲಕಾಲಕ್ಕೆ ಯುಐಡಿಎಐ ಪೋರ್ಟಲ್ನಲ್ಲಿ ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸುತ್ತಿರಿ. ಅಪರಿಚಿತ ಅಥವಾ ಅನುಮಾನಾಸ್ಪದ ಸ್ಥಳಗಳಲ್ಲಿ ಆಧಾರ್ ಜೆರಾಕ್ಸ್ ಮಾಡಿಸುವುದನ್ನು ತಪ್ಪಿಸಿ, ಎಚ್ಚರದಿಂದಿರಿ.




