Hubli: ಮಾಂಜಾ ದಾರ ಬಳಕೆ ಮಾಡಿದ್ರೆ ಕ್ರಿಮಿನಲ್ ಕೇಸ್..! ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

Hubli: ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಮಾಂಜಾ ದಾರ ಬಳಸುವವರು ಹಾಗೂ ಮಾರಾಟ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಬಳಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಮೃತಪಟ್ಟಿರುವ ಘಟನೆ ಬೆನ್ನಲ್ಲೇ, ಹುಬ್ಬಳ್ಳಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ಮೃತ ಮಹಿಳೆಯ ದೇಹವನ್ನು ಪರಿಶೀಲಿಸಿ, ಕುಟುಂಬಸ್ಥರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು, ಮಾಂಜಾ ದಾರ ಬಳಕೆ ಮಾಡುವವರನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸಬಾರದು. ಬಳಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಂಜಾ ದಾರಕ್ಕೆ ಮಹಿಳೆ ಬಲಿಯಾದ ಘಟನೆ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಜೀವಕ್ಕೆ ಅಪಾಯ ತರುವ ಮಾಂಜಾ ದಾರದ ಬಳಕೆ ಹಾಗೂ ಮಾರಾಟ ತಡೆಯಲು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಈ ನಿಯಮ ಉಲ್ಲಂಘಿಸುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

About The Author