Hubli News: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯೇ ಪ್ರಶ್ನೆಯಾಗಿದೆ. ಆರು ಮಕ್ಕಳನ್ನು ಕರೆದೊಯ್ಯುವ ಸಾಮರ್ಥ್ಯದ ಆಟೋಗಳಲ್ಲಿ ಹತ್ತು, ಹನ್ನೆರಡು, ಹದಿಮೂರು ಮಕ್ಕಳನ್ನು ತುಂಬಿಕೊಂಡು ಶಾಲೆಗೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಿಯಮಗಳ ಪಾಲನೆ ಎಲ್ಲಿ? ಮಕ್ಕಳ ಸುರಕ್ಷತೆಯ ಹೊಣೆ ಯಾರದ್ದು? ಈ ಕುರಿತು ನಮ್ಮ ವಿಶೇಷ ವರದಿ.
ಆರು ಮಕ್ಕಳಿಗೆ ಅವಕಾಶ.. ಆಟೋದಲ್ಲಿ ಮಾತ್ರ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು..!
ಶಾಲೆಗೆ ಹೋಗುವ ಪುಟಾಣಿಗಳ ಪ್ರಯಾಣವೇ ಅಪಾಯದ ಪ್ರಯಾಣವಾಗುತ್ತಿದೆಯೇ?
ಹುಬ್ಬಳ್ಳಿಯ ವಿವಿಧ ಶಾಲೆಗಳ ಮುಂದೆ ಕಂಡುಬರುತ್ತಿದೆ ಎನ್ನಲಾದ ಈ ದೃಶ್ಯಗಳು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೋಗಳಲ್ಲಿ ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಬ್ಬರ ಪಕ್ಕದಲ್ಲಿ ಮತ್ತೊಬ್ಬರು ಕಿಕ್ಕಿರಿದು ಕುಳಿತುಕೊಳ್ಳುವ ಮಕ್ಕಳು, ಅವರ ನಡುವೆ ಸಿಲುಕುವ ಶಾಲಾ ಬ್ಯಾಗ್ಗಳು.. ಇಂತಹ ಪ್ರಯಾಣದಲ್ಲಿ ಚಾಲಕನ ಸಣ್ಣ ನಿರ್ಲಕ್ಷ್ಯವೂ ಅಪಾಯಕ್ಕೆ ಕಾರಣವಾಗಬಹುದು.
ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂಬ ನಂಬಿಕೆಯಿಂದ ಪೋಷಕರು ತಿಂಗಳಿಗೆ 800ರಿಂದ 1,000 ರೂಪಾಯಿವರೆಗೆ ವಾಹನ ಶುಲ್ಕ ಪಾವತಿಸುತ್ತಾರೆ. ಆದರೆ, ಮಕ್ಕಳ ಸಾಗಣೆಯಲ್ಲಿ ಸುರಕ್ಷತಾ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬ ಪ್ರಶ್ನೆ ಈಗ ಪೋಷಕರನ್ನು ಕಾಡುತ್ತಿದೆ.
ಮಕ್ಕಳನ್ನು ಶಾಲೆಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಚಾಲಕರು ನಿಯಮಗಳನ್ನು ಪಾಲಿಸಬೇಕಾದದ್ದು ಅತ್ಯಗತ್ಯ. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುವುದರಿಂದ ಅಪಘಾತದ ಅಪಾಯ ಹೆಚ್ಚುವ ಸಾಧ್ಯತೆಯಿದೆ.
ಇತ್ತ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನಗಳ ನಿಯಮಬದ್ಧತೆಯನ್ನು ಪರಿಶೀಲಿಸಬೇಕಿದೆ. ಸಂಚಾರ ಪೊಲೀಸರು ರಸ್ತೆ ಸುರಕ್ಷತೆಯ ಬಗ್ಗೆ ನಿಗಾ ವಹಿಸಬೇಕಿದೆ. ಶಾಲಾ ಆಡಳಿತ ಮಂಡಳಿಗಳೂ ಮಕ್ಕಳನ್ನು ಕರೆತರುವ ಮತ್ತು ಕರೆದೊಯ್ಯುವ ವಾಹನಗಳ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕಿದೆ.
ಹಣ ಉಳಿಸುವ ಅಥವಾ ಹೆಚ್ಚು ಮಕ್ಕಳನ್ನು ಸಾಗಿಸುವ ಉದ್ದೇಶಕ್ಕಿಂತ ಮಕ್ಕಳ ಜೀವದ ಸುರಕ್ಷತೆಯೇ ಮುಖ್ಯವಲ್ಲವೇ?
ಒಂದು ವೇಳೆ ಆಟೋ ಅಪಘಾತಕ್ಕೀಡಾದರೆ, ಅದರಲ್ಲಿರುವ ಮಕ್ಕಳ ಸುರಕ್ಷತೆಯ ಹೊಣೆ ಯಾರದ್ದು?
ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ, ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಲ್ಲವೇ?
ಶಾಲಾ ಮಕ್ಕಳನ್ನು ಸಾಗಿಸುವ ಆಟೋಗಳ ಸಾಮರ್ಥ್ಯ, ಪರವಾನಗಿ ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಯುತ್ತಿದೆಯೇ? ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಮಕ್ಕಳು ದೇಶದ ಭವಿಷ್ಯ.. ಅವರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇರಬಾರದು..!
ಶಾಲೆಗೆ ಹೋಗುವ ದಾರಿಯೇ ಮಕ್ಕಳ ಪಾಲಿಗೆ ಅಪಾಯದ ದಾರಿಯಾಗಬಾರದು. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಕ್ರಮ, ಶಾಲಾ ವಾಹನಗಳ ನಿಯಮಿತ ಪರಿಶೀಲನೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಈಗ ಅತ್ಯಗತ್ಯ.
ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ, ಅನಾಹುತಕ್ಕೂ ಮುನ್ನವೇ ಕ್ರಮ ಕೈಗೊಳ್ಳಬೇಕಿದೆ.
ಮಕ್ಕಳ ಸುರಕ್ಷತೆ ಕೇವಲ ಪೋಷಕರ ಜವಾಬ್ದಾರಿಯಲ್ಲ; ಚಾಲಕರು, ಶಾಲಾ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳೂ ಸಮಾನ ಹೊಣೆಗಾರಿಕೆ ವಹಿಸಬೇಕಿದೆ.
ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.




