ತನಗೆ ನಿಂದಕ ಮಂತ್ರಿ ಎಂದಿದ್ದಕ್ಕೆ ಕುಮಾರಸ್ವಾಮಿ ಅವರ ಹಳೆಯ ಹೇಳಿಕೆ ನೆನಪಿಸಿದ ಗೃಹ ಸಚಿವ ಪ್ರಿಯಾಂಕ್

Political News: ನಿನ್ನೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಕ ಮಂತ್ರಿ ಎಂದು ಹೇಳಿದ್ದರು.

ನಿಂದಕ ಮಂತ್ರಿ ಪ್ರಿಯಾಂಕ್ ಖರ್ಗೆ, ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ. ಹೀಗೆ ಕುಮಾರಸ್ವಾಮಿ ಕಿಡಿಕಾರಿದ್ದರು.

ಇದಕ್ಕೆ ಇಂದು ಪ್ರಿಯಾಂಕ್ ಪ್ರತ್ಯುತ್ತರ ನೀಡಿದ್ದು, ಪರಿಹಾರ ಕೇಳಿಕೊಂಡು ಬಂದ ಹೆಣ್ಣುಮಗಳಿಗೆ “ಇಷ್ಟು ದಿನ ಎಲ್ಲಿ ಮಲಗಿದ್ದೆ” ಎಂದು ಅಸಭ್ಯವಾಗಿ ಮಾತಾಡಿದವರು ನಾನಲ್ಲ, ನೀವು… ನೀವೂ ಕುಳಿತಿದ್ದಂತಹ ಮುಖ್ಯಮಂತ್ರಿ ಹುದ್ದೆಗೆ ಗೌರವ ಕೊಡುವ ಪ್ರಜ್ಞೆ ಇಲ್ಲದೆ ಏಕವಚನದಲ್ಲಿ ಮಾತನಾಡಿದ್ದು ನಾನಲ್ಲ, ನೀವು… “ನಿಂದಕ ಮಂತ್ರಿ” ಎಂಬ ಬಿರುದಿಗೆ ನಿಮ್ಮ ಹೊರತು ಬೇರೆ ಯಾರೂ ಸೂಕ್ತರಲ್ಲ ಎಂದಿದ್ದಾರೆ.

RSSನ್ನು ವಿಷಸರ್ಪ ಎಂದಿದ್ದ ತಾವು ಅದೇ ವಿಷಸರ್ಪದ ವಿಷವನ್ನು ಮೈಗೇರಿಸಿಕೊಂಡು ನಮ್ಮ ಮೇಲೆ ವಿಷ ಕಕ್ಕುತ್ತಿರುವುದು ನಿಮ್ಮ ವಚನಭ್ರಷ್ಟತೆಗೆ, ಸಿದ್ದಾಂತಭ್ರಷ್ಟತೆಗೆ, ಮತ್ತು ನೈತಿಕಭ್ರಷ್ಟತೆಗೆ ನಿದರ್ಶನ. ಕುಮಾರಸ್ವಾಮಿಯವರೇ, ಕೇಂದ್ರದ ಕೈಗಾರಿಕಾ ಸಚಿವರಾಗಿ ನಿಮ್ಮ ಸಾಧನೆ ಹೇಳಿಕೊಳ್ಳಬೇಕಿತ್ತು, ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಹೇಳಬೇಕಿತ್ತು, ಆದರೆ ನಿಮ್ಮ ಸಾಧನೆಗಳು ಶೂನ್ಯ ಆಗಿರುವುದರಿಂದ ನನ್ನ ಕುಟುಂಬದ ನಿಂದನೆಯನ್ನು ಬಾಯಿಚಪಲ ಮಾಡಿಕೊಂಡಿರುವುದು ನೀವಲ್ಲವೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಿಕೊಡಬಹುದಾದ ಹುದ್ದೆಯಲ್ಲಿದ್ದರೂ ಕಿಂಚಿತ್ ಸಾಧನೆಯನ್ನೂ ಮಾಡದ ತಾವು ಉದ್ಯೋಗ ಮಂತ್ರಿಯಾಗುವ ಬದಲು ನಿರುದ್ಯೋಗ ಮಂತ್ರಿಯಾಗಿರುವುದು ಈ ನಾಡಿನ ದುರಂತ.

ಉತ್ತರಕುಮಾರಣ್ಣಾ, ಹೆಚ್ಚೇನೂ ಮಾತನಾಡುವುದು ಬೇಡ, ಸಿದ್ದರಾಮಯ್ಯನವರ ತೇಜೋವಧೆಯ ವಿಡಿಯೋವನ್ನು ಬಹಿರಂಗಪಡಿಸಿದವರು ಯಾರು? ಬೇರೆಲ್ಲಾ ಮಾಹಿತಿಗಳಿರುವ ತಮಗೆ ಇದರ ಮಾಹಿತಿಯೂ ಖಂಡಿತಾ ಇರುತ್ತದೆ, ಇದೊಂದು ಪ್ರಶ್ನೆಗೆ ಎದೆ ಮೇಲೆ ಕೈ ಇಟ್ಟು ಸತ್ಯ ಹೇಳಿಬಿಡಿ ಸಾಕು….ಎಂದು ಪ್ರಿಯಾಂಕ್ ಸವಾಲ್ ಹಾಕಿದ್ದಾರೆ.

About The Author