ಬೀಗ ಹಾಕಿದ್ದ ದೇವಸ್ಥಾನದೊಳಗೆ ದೇವರ ಮೂರ್ತಿ ಸ್ಥಳ ಬದಲಾವಣೆ – ಭಕ್ತರಲ್ಲಿ ಅಚ್ಚರಿ!

Tumakuru News: ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, *ಹುಲಿಹಳ್ಳಿ ಗ್ರಾಮದ ಕಾಲೋನಿ*ಯಲ್ಲಿ ನಿನ್ನೆ ರಾತ್ರಿ ನಡೆದಿರುವ ಒಂದು ನಿಗೂಢ ಘಟನೆ ಇಡೀ ತಾಲ್ಲೂಕಿನ ಜನರನ್ನೇ ಬೆಚ್ಚಿ ಬೀಳಿಸಿದೆ.

ದಲಿತ ಕಾಲೋನಿ ನಿವಾಸಿಗಳ ಕುಲದೇವರುಗಳಾದ ಪಿರಿಯಾಪಟ್ಟಣದಮ್ಮ ಮತ್ತು ಅಣ್ಣಪ್ಪ ಸ್ವಾಮಿ ಯವರಿಗೆ ವಿಶೇಷ ಕಟ್ಟಳೆ ಪೂಜೆಯನ್ನು ಭಾನುವಾರ ರಾತ್ರಿ ಅತ್ಯಂತ ಭಕ್ತಿಯಿಂದ, ಗ್ರಾಮಸ್ಥರೆಲ್ಲ ಸೇರಿ ನೆರವೇರಿಸಿದ್ದರು. ಪೂಜೆ ಮುಗಿದ ಮೇಲೆ ಇಬ್ಬರೂ ದೇವರುಗಳ ಮೂರ್ತಿಗಳನ್ನು ಗರ್ಭಗುಡಿಯೊಳಗೆ ಇಟ್ಟು, ಅರ್ಚಕರು ಎಂದಿನಂತೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ದೇವಸ್ಥಾನಕ್ಕೆ ಎರಡು ಬೀಗ – ಗರ್ಭಗುಡಿ ಮತ್ತು ಪಡಸಾಲೆ.

ಆದರೆ ಮರುದಿನ ಸೋಮವಾರ ಬೆಳಗ್ಗೆ 5:30ಕ್ಕೆ ಅರ್ಚಕರು ಬಂದು ಅಂಗಳ ಗುಡಿಸಿದ ನಂತರ ಪಡಸಾಲೆ ಬಾಗಿಲು ತೆರೆಯಲು ಹೋದಾಗ ಕಂಡಿದ್ದು ನಂಬಲು ಅಸಾಧ್ಯವಾದ ದೃಶ್ಯ!

ರಾತ್ರಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಅಣ್ಣಪ್ಪ ಸ್ವಾಮಿಯ ಮೂರ್ತಿ, ದೇವಸ್ಥಾನದ ಮುಖ್ಯ ಬಾಗಿಲಿಗೆ ಅಡ್ಡವಾಗಿ, ಬಾಗಿಲು ತೆಗೆಯದಂತೆ ಬೆನ್ನು ಮಾಡಿ ಕುಳಿತಿದೆ! ಮುಖ್ಯ ವಿಷಯ ಅಂದರೆ – ಹೊರಗಿನ ಬಾಗಿಲಿಗೆ ಹಾಕಿದ್ದ ಬೀಗ ಹಾಗೇ ಇತ್ತು, ಒಳಗಿಂದ ಯಾರೂ ತೆಗೆದ ಕುರುಹು ಇಲ್ಲ. ಮೂರ್ತಿ ಒಂದೇ ರಾತ್ರಿಯಲ್ಲಿ ಹೇಗೆ ಚಲಿಸಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕಾಲೋನಿಯ ಗ್ರಾಮದ ನಿವಾಸಿಗಳು ಮಾತನಾಡಿ “ನಾವು 40 ವರ್ಷದಿಂದ ಈ ದೇವಸ್ಥಾನ ನೋಡ್ತಾ ಇದ್ದೀವಿ, ಇಂತಹ ಪವಾಡ ಎಂದೂ ಆಗಿರಲಿಲ್ಲ. ದೇವರು ನಮ್ಮ ಕಟ್ಟಳೆ ಪೂಜೆಗೆ ಮೆಚ್ಚಿ ಹೊರಬಂದು ಕಾವಲು ಕಾಯುತ್ತಿದ್ದಾನೆ ಅನ್ಸುತ್ತೆ” ಎಂದು ಗ್ರಾಮದ ಹಿರಿಯರೊಬ್ಬರು ಕಣ್ಣೀರು ಹಾಕುತ್ತಾ ಹೇಳಿದರು.

ಗ್ರಾಮದ ಮಹಿಳೆಯೊಬ್ಬರು ಮಾತನಾಡಿ “ರಾತ್ರಿ ದೇವಸ್ಥಾನದಿಂದ ಗೆಜ್ಜೆ ಸದ್ದು ಕೇಳಿಸ್ತು ಅನ್ಸಿತ್ತು, ಆದ್ರೆ ಗಾಳಿ ಇರಬಹುದು ಅಂತ ಸುಮ್ಮನಾದೆವು” ಆದರೆ ಇವೆಲ್ಲ ವಿಸ್ಮಯ ಪವಾಡನೆಗಳನ್ನು ನೋಡಿದರೆ ದೇವರೇ ಇರಬಹುದು ಎಂಬುದು ನಮ್ಮ ನಂಬಿಕೆ ಎಂದಿದ್ದಾರೆ.

ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ತಿಪಟೂರು, ಸುತ್ತಮುತ್ತಲಿನ ನೂರಾರು ಜನರು ಈ ಪವಾಡ ನೋಡಲು ಹುಲಿಹಳ್ಳಿಗೆ ಬರುತ್ತಿದ್ದಾರೆ. ದೇವಸ್ಥಾನದ ಮುಂದೆ ಜನಜಾತ್ರೆಯೇ ಸೇರಿದೆ.

ಇದು ನಿಜವಾಗಲೂ ದೈವಿಕ ಪವಾಡವೇ? ಅಥವಾ ಯಾರಾದರೂ ಮಾಡಿರುವ ತಮಾಷೆಯೇ? ಎಂಬ ಬಗ್ಗೆ ಇನ್ನೂ ನಿಗೂಢತೆ ಮುಂದುವರೆದಿದೆ.

About The Author