Political News: KPSC ಪರೀಕ್ಷೆಯ ಬಳಿಕ ಇದೀಗ KEA ನಡೆಸಿದ VAO ಮತ್ತು KSRP ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಯಲ್ಲಿ ಓಎಂಆರ್ ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟು ಬಂದಿದ್ದರೂ 80ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎನ್ನಲಾದ ಅಭ್ಯರ್ಥಿಗಳ ಬಗ್ಗೆ ಉದ್ಯೋಗಾಕಾಂಕ್ಷಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ SIT ರಚಿಸುವಂತೆ ಆಗ್ರಹಿಸಿದ್ದಾರೆ.
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಅಕ್ರಮಗಳ ಆತಂಕ ಮತ್ತೆ ಎದುರಾಗಿದೆ. KPSC ಬಳಿಕ ಇದೀಗ KEA ನಡೆಸಿದ VAO ಮತ್ತು KSRP ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಉದ್ಯೋಗಾಕಾಂಕ್ಷಿಗಳು ಮಾಡುತ್ತಿರುವ ಆರೋಪದ ಪ್ರಕಾರ, ಸುಮಾರು 30 ಅಭ್ಯರ್ಥಿಗಳು ಓಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಗುರುತು ಮಾಡದೆ ಖಾಲಿ ಬಿಟ್ಟು ಬಂದಿದ್ದಾರೆ. ಆದರೆ ಅವರಲ್ಲಿ ಕೆಲವರಿಗೆ 80ಕ್ಕೂ ಹೆಚ್ಚು ಅಂಕಗಳು ಬಂದಿವೆ ಎನ್ನಲಾಗಿದೆ.
ಇದಕ್ಕೆ ಉದಾಹರಣೆಯಾಗಿ ಶಿವಾನಂದ ಬಿ. ಪಾಟೀಲ್ ಎಂಬ ಅಭ್ಯರ್ಥಿಯ VAO ಪರೀಕ್ಷೆಯ ಓಎಂಆರ್ ಪತ್ರಿಕೆಯಲ್ಲಿ ಕೇವಲ 11 ಪ್ರಶ್ನೆಗಳಿಗೆ ಮಾತ್ರ ಉತ್ತರ ಗುರುತು ಮಾಡಿದ್ದರೂ, ಫಲಿತಾಂಶದಲ್ಲಿ 80ಕ್ಕೂ ಹೆಚ್ಚು ಅಂಕ ಬಂದಿರುವುದಾಗಿ ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ.
ಕೆಲವು ಅಭ್ಯರ್ಥಿಗಳಿಗೆ ಓಎಂಆರ್ ಶೀಟ್ ಖಾಲಿ ಬಿಡುವಂತೆ ಯಾರೋ ಸೂಚನೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಉದ್ಯೋಗ ಕೊಡಿಸುವುದಾಗಿ ಹಣ ಪಡೆದಿದ್ದ ವ್ಯಕ್ತಿಗಳ ಸೂಚನೆಯ ಮೇರೆಗೆ ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟಿದ್ದಾರೆ ಎಂಬ ಅನುಮಾನವನ್ನು ಉದ್ಯೋಗಾಕಾಂಕ್ಷಿಗಳು ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಓಎಂಆರ್ನಲ್ಲಿ ಐದನೇ ಆಯ್ಕೆಯನ್ನು ಗುರುತು ಮಾಡಬೇಕು ಎಂಬ ನಿಯಮವಿದೆ ಎಂದು ಹೇಳುತ್ತಿರುವ ಅಭ್ಯರ್ಥಿಗಳು, ಉತ್ತರ ಪತ್ರಿಕೆ ಖಾಲಿ ಬಿಟ್ಟವರಿಗೆ ಹೆಚ್ಚಿನ ಅಂಕ ಬಂದಿರುವುದು ಹೇಗೆ ಎಂಬ ಪ್ರಶ್ನೆ ಎತ್ತಿದ್ದಾರೆ.
KEA ಪರೀಕ್ಷೆ ನಡೆಸಿದರೂ ಪಾರದರ್ಶಕತೆ ಬಗ್ಗೆ ಅನುಮಾನ ಮೂಡಿದೆ ಎಂದು ಉದ್ಯೋಗಾಕಾಂಕ್ಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, SIT ರಚನೆ ಮಾಡಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.




