Hubli News: ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ – ತೇಜಸ್ವಿ ಸೂರ್ಯ ವಾಗ್ದಾಳಿ

Hubli News: ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಹೆಸರಿನಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಯುವ ಸಂವಾದ ಕಾರ್ಯಕ್ರಮ ನಡೆದಿದೆ. ಸಂವಾದದಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಸೋತಾಗ ಮಾತ್ರ ಮತಗಳ್ಳತನ ಮತ್ತು ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಇದೇ ವೇಳೆ ರಾಜ್ಯದ ಸ್ಟಿಂಗ್ ಪ್ರಕರಣಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಯುವ ಸಂವಾದ ಕಾರ್ಯಕ್ರಮ. ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ವಿಷಯದಡಿ ನಡೆದ ಸಂವಾದದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೇಶದ ರಾಜಕೀಯ ಬೆಳವಣಿಗೆಗಳು, ಚುನಾವಣೆ ಮತ್ತು ಪ್ರಜಾಪ್ರಭುತ್ವದ ಕುರಿತು ಮಾತನಾಡಿದರು.

ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ವಿಶ್ವಾಸವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಗೆದ್ದಾಗ ಎಲ್ಲವೂ ಸರಿಯಿದೆ ಎನ್ನುವ ಕಾಂಗ್ರೆಸ್, ಸೋತಾಗ ಮಾತ್ರ ವೋಟ್ ಚೋರಿ ಮತ್ತು ಎಸ್‌ಐಆರ್ ಬಗ್ಗೆ ಪ್ರಶ್ನೆ ಎತ್ತುತ್ತಿದೆ ಎಂದು ಟೀಕಿಸಿದರು.

2014ರಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಾಗ ಎಸ್‌ಐಆರ್ ಅಥವಾ ಜ್ಞಾನೇಶ್ ಕುಮಾರ್ ಇರಲಿಲ್ಲವೇ? ಕೇರಳ ಮತ್ತು ಕರ್ನಾಟಕದಲ್ಲಿ ಗೆದ್ದಾಗ ಕಾಂಗ್ರೆಸ್ ನಾಯಕರು ಅಧಿಕಾರ ಸ್ವೀಕರಿಸಲಿಲ್ಲವೇ? ಹಾಗಾದರೆ ಅಲ್ಲಿ ಗೆದ್ದ ಸರ್ಕಾರಗಳ ರಾಜೀನಾಮೆ ಕೇಳುತ್ತೀರಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಚುನಾವಣೆ ಆರಂಭವಾದಾಗಿನಿಂದಲೂ ಮತಗಳ್ಳತನ ಮಾಡುತ್ತಿರುವುದು ಕಾಂಗ್ರೆಸ್ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.

ಇನ್ನು ರಾಜ್ಯದಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿರುವ ಸ್ಟಿಂಗ್ ಪ್ರಕರಣದ ಬಗ್ಗೆಯೂ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದರು. ಈ ಬೆಳವಣಿಗೆಗಳಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದವರು ಒಟ್ಟಿಗೆ ಕುಳಿತು ಟಿವಿ ನೋಡುವ, ಪತ್ರಿಕೆ ಓದುವ ವಾತಾವರಣವೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು, ರಾಜ್ಯದಲ್ಲಿ ಇಂತಹ ಕೆಟ್ಟ ಪರಂಪರೆ ಅಂತ್ಯವಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಡೆಸಿದ ಮಾಕ್ ಪಾರ್ಲಿಮೆಂಟ್ ವಿಚಾರವಾಗಿಯೂ ಟೀಕಿಸಿದ ಅವರು, ನೈಜ ಸಂಸತ್ತಿನಲ್ಲಿ ಚರ್ಚೆಗೆ ಬರದವರು ಮಾಕ್ ಪಾರ್ಲಿಮೆಂಟ್ ನಡೆಸಿ ಭಾಷಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಲವು ಚುನಾವಣೆಗಳಲ್ಲಿ ಸೋತಿದೆ. ಎಸ್‌ಐಆರ್ ಜಾರಿಗೆ ಬರುವುದಕ್ಕೂ ಮೊದಲೇ ಕಾಂಗ್ರೆಸ್ ಅನೇಕ ಚುನಾವಣೆಗಳಲ್ಲಿ ಸೋತಿತ್ತು ಎಂದು ಹೇಳಿದರು. ಅಕ್ರಮ ವಲಸಿಗರಿಗೆ ಮತದಾನದ ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದರು.

ಒಟ್ಟಿನಲ್ಲಿ ಯುವ ಸಂವಾದದ ವೇದಿಕೆಯಲ್ಲಿ ಸಂಸದ ತೇಜಸ್ವಿ ಸೂರ್ಯ ದೇಶದ ಚುನಾವಣಾ ವ್ಯವಸ್ಥೆ, ಕಾಂಗ್ರೆಸ್ ರಾಜಕೀಯ ನಿಲುವು ಹಾಗೂ ರಾಜ್ಯದ ಸ್ಟಿಂಗ್ ಪ್ರಕರಣಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ರಾಜಕೀಯ ವಾಗ್ವಾದಕ್ಕೂ ವೇದಿಕೆಯಾಯಿತು.

About The Author