ಪರಿಹಾರ ನೀಡಲು ಗತಿ ಇಲ್ಲ, ಭಿಕ್ಷೆ ಬೇಡಲು ನಾಚಿಕೆ ಇಲ್ಲ!: ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

Political News: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ತುರ್ತು ಆರ್ಥಿಕ ನೆರವನ್ನು ಕೋರಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಬರ ಪರಿಹಾರದ ಮನವಿಯನ್ನು ಖುದ್ದಾಗಿ ಸಲ್ಲಿಸಲು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ತಮಗೆ ಭೇಟಿಗೆ ಸಮಯಾವಕಾಶ ನೀಡುವಂತೆ ಡಿಸಿಎಂ ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಪತ್ರ ಬರೆದಿದ್ದಾರೆನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ, 2,500 ರೂ. ಚಿಲ್ಲರೆ ಕಾಸಿನ ಪರಿಹಾರವನ್ನು ಘೋಷಣೆ ಮಾಡಿದರೂ, ಅದು ರೈತರ ಕೈ ಸೇರಿಲ್ಲ. ಗ್ಯಾರಂಟಿ ಸಮಿತಿ ರಚಿಸಿಕೊಂಡು, ಕಮಿಶನ್‌ ಹೊಡೆದುಕೊಂಡು ಬದುಕುವ ಕಾಂಗ್ರೆಸ್‌ನ ವಸೂಲಿ ವೀರ ನಾಯಕರಿಗೆ ರೈತರ ಕಷ್ಟ ಆಲಿಸಿ ಹೆಚ್ಚಿನ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಇದರ ನಡುವೆ ಕಂದಾಯ ಸಚಿವ ಜಿ.ಪರಮೇಶ್ವರ್ ಅವರು ಮಾತ್ರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭಿಕ್ಷೆ ಬೇಡುತ್ತಿದ್ದಾರೆ ಎಂದು ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳೇ, 226 ತಾಲೂಕುಗಳಲ್ಲಿ ಬರಗಾಲವಿದ್ದು, 57.93 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 62,481.88 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಬರ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕ ಪರಿಹಾರವನ್ನು ವಿತರಿಸಬೇಕೆ ಹೊರತು ಕೇಂದ್ರ ಸರ್ಕಾರವನ್ನು ಕಾಯುತ್ತಾ ಕೂರಬಾರದು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಪರಿಹಾರ ವಿತರಣೆ ಮಾಡುವುದು ಕಾಲಕಾಲಕ್ಕೆ ನಡೆಯುವ ಪ್ರಕ್ರಿಯೆ. ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರವನ್ನು ತನ್ನ ವತಿಯಿಂದ ವಿತರಿಸುವ ಪ್ರಕ್ರಿಯೆ ಮಾಡಬೇಕೇ ಹೊರತು ʼಬೇಡುವ ಪ್ರಕ್ರಿಯೆʼ ಮಾಡುತ್ತಾ ಕೂರಬಾರದು. ಬೇಡುವುದು ಬಿಡಿ, ನಿಮ್ಮ ಕಡೆಯಿಂದ ಕೊಡುವ ಕೆಲಸ ಮಾಡಿ. ಇಲ್ಲವಾದರೆ ನಮ್ಮ ಖಜಾನೆ ಖಾಲಿ ಎಂದು ಘೋಷಣೆ ಮಾಡಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author