Political News: ಮೇ ವರೆಗೆ ಕುಡಿವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸಿ: ಈಶ್ವರ ಖಂಡ್ರೆ

Political News: ಮೈಸೂರು, ನ.4: ಎಲ್ ನಿ ನೋ ಪ್ರಭಾವದಿಂದ ಮಳೆಯ ಕೊರತೆ ಆಗಿದ್ದು, ನದಿ, ಕೆರೆ, ಸರೋವರಗಳಲ್ಲಿ ನೀರಿನ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಮುಂದಿನ ಮೇವರೆಗೆ ಕುಡಿಯುವ ನೀರಿಗೆ ಕೊರತೆ ಆಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರತಿ ಗ್ರಾಮದಲ್ಲೂ ಕೊಳವೆ ಬಾವಿಗಳ ನೀರಿನ ಮಟ್ಟ ಪರೀಕ್ಷಿಸಿ, ಅಂತರ್ಜಲ ಎಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ಅಂದಾಜು ಮಾಡುವಂತೆ ತಿಳಿಸಿದರು.

ಅದೇ ರೀತಿ ಮೇಲ್ಮೈ ನೀರಿನ ಲಭ್ಯತೆ ಎಷ್ಟಿದೆ, ಎಷ್ಟು ಕೊಳವೆ ಬಾವಿ ಇದೆ. ಎಷ್ಟು ಖಾಸಗಿ ಕೊಳವೆ ಬಾವಿ ಇದೆ. ಎಷ್ಟು ನೀರಿನ ಟ್ಯಾಂಕರ್ ಲಭ್ಯವಿದೆ ಎಂಬ ಅಧ್ಯಯನ ಮಾಡಿ, ಮುಂದಿನ 7 ತಿಂಗಳಿಗೆ ನೀರು ಪೂರೈಸಲು ಯೋಜನೆ ರೂಪಿಸುವಂತೆ ತಿಳಿಸಿದರು.

ಏಕಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ, ನೀರು ಬಾರದಿದ್ದರೆ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಕೊಡಲು ಸೂಚಿಸಿದರು.

ನೀರು ಜೀವಜಲ. ನೀರಿಲ್ಲದೆ ಜನರು ಬದುಕಲು ಸಾಧ್ಯವಿಲ್ಲ. ಹೀಗಾಗಿ ದೂರು ಬಂದ 24 ಗಂಟೆಗಳ ಒಳಗಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಿಓಗಳಿಗೆ ಹಾಗೂ ಜೆಜೆಎಂ ಎಂಜಿನಿಯರುಗಳಿಗೆ ಸ್ಪಷ್ಟ ಸೂಚನೆ ನೀಡಿದರುವಿ.

ಭಾರತ ಹಳ್ಳಿಗಳ ದೇಶ. ಹಳ್ಳಿಗಳೇ ದೇಶದ ಆತ್ಮ ಎಂದ ಅವರು, ಭಾರತದಲ್ಲಿ ಸುಮಾರು 6.4 ಲಕ್ಷ ಹಳ್ಳಿಗಳಿವೆ. ರಾಜ್ಯದಲ್ಲಿ ಸುಮಾರು 30 ಸಾವಿರ ಹಳ್ಳಿಗಳಿವೆ. ದೇಶದಲ್ಲಿ ಒಟ್ಟಾರೆ 2.68 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿದ್ದರೆ ರಾಜ್ಯದಲ್ಲಿ 31 ಜಿಲ್ಲಾ ಪಂಚಾಯತಿಗಳಿವೆ. 239 ತಾಲೂಕು ಪಂಚಾಯತಿಗಳಿವೆ. 5927 ಗ್ರಾಮ ಪಂಚಾಯತಿಗಳಿವೆ. ಈ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾಡುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.

ವಿಬಿಜಿ ರಾಮ್ ಜಿ ಅಡಿಯಲ್ಲಿ ಯಾವ ಯಾವ ಗ್ರಾಮದಲ್ಲಿ ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ಪರಾಮರ್ಶೆ ನಡೆಸಿದ ಅವರು, ನಿರ್ಲಕ್ಷ್ಯ ತೋರಿರುವ ಪಿಡಿಓಗಳಿಗೆ ಎಚ್ಚರಿಕೆ ನೀಡಿ, ಅಕುಶ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸ್ವಾಧೀನದಲ್ಲಿ ಮತ್ತು ನಿರ್ವಹಣೆಯಲ್ಲಿರುವ 2822 ಕೆರೆಗಳ ಪೈಕಿ 82 ಕೆರೆಗಳ 200 ಎಕರೆ ಭೂಮಿ ಒತ್ತುವರಿಯಾಗಿದೆ. ಇದರ ತೆರವಿಗೆ ಕ್ರಮ ವಹಿಸಿ, ಕೆರೆ ಸಂರಕ್ಷಿಸಿ ಎಂದು ಸೂಚಿಸಿದರು.

ನಂತರ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪರಿಚಯಾತ್ಮಕ ಸಭೆಯನ್ನೂ ನಡೆಸಿದರು.

ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತ ವೈ.ಎಸ್. ಪಾಟೀಲ್, ಮೈಸೂರು ಸಿಇಓ ಉಕೇಶ್ ಕುಮಾರ್, ನಜೀರ್ ಸಾಬ್ ಸಂಸ್ಥೆಯ ನಿರ್ದೇಶಕ ಶೇಖ್ ತನ್ವೀರ್ ಆಸಿಫ್, ವಿಬಿಜಿ ರಾಮ್ ಜಿ ನಿರ್ದೇಶಕ ದಿಡ್ಡಿಮನಿ ಮತ್ತಿತರರು ಪಾಲ್ಗೊಂಡಿದ್ದರು.

About The Author