ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಹೊಸ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹಾರ್ಪರ್ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಹಲವು ರೋಚಕ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧ ಹಾಗೂ ವರ್ಷಗಳಲ್ಲಿ ನಡೆದ ಸೀಮಿತ ಮಾತುಕತೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರವಾಗಿ ಬರೆಯಲಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ ಎಂದಿರುವ ಸೋನಿಯಾ ಗಾಂಧಿ, ಭೇಟಿಯಾದಾಗಲೆಲ್ಲಾ ಕೇವಲ ಔಪಚಾರಿಕ ನಮಸ್ಕಾರಕ್ಕೆ ಮಾತ್ರ ಅದು ಸೀಮಿತವಾಗಿತ್ತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರ ರಾಜಕೀಯ ಪಯಣದ ಬಗ್ಗೆಯೂ ಸೋನಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಾಮಾನ್ಯ ಹಾಗೂ ಹಿಂದುಳಿದ ಹಿನ್ನೆಲೆಯಿಂದ ಬಂದಿದ್ದರೂ, ಆರ್ಎಸ್ಎಸ್ನಲ್ಲಿ ತಮ್ಮದೇ ಆದ ಸ್ವಂತ ಪ್ರಯತ್ನದಿಂದ ದೇಶದ ಉನ್ನತ ಅಧಿಕಾರದ ಹಂತಕ್ಕೇರಿದವರು ನರೇಂದ್ರ ಮೋದಿ ಎಂದು ಬಣ್ಣಿಸಿದ್ದಾರೆ. ಇಬ್ಬರ ರಾಜಕೀಯ ಹಿನ್ನೆಲೆ ಹಾಗೂ ಸಿದ್ಧಾಂತಗಳು ಸಂಪೂರ್ಣ ಭಿನ್ನವಾಗಿವೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಸಂಸತ್ ಅಧಿವೇಶನದ ಬಳಿಕ ಲೋಕಸಭಾಧ್ಯಕ್ಷರ ಕೊಠಡಿಯಲ್ಲಿ ನಡೆಯುವ ಸಭೆಗಳು ಅಥವಾ ಅರೆ-ಅಧಿಕೃತ ಕಾರ್ಯಕ್ರಮಗಳಲ್ಲಿ ಮಾತ್ರ ತಾವು ಭೇಟಿಯಾಗುತ್ತಿದ್ದುದಾಗಿ ನೆನಪಿಸಿಕೊಂಡಿದ್ದಾರೆ. ತಾವೊಮ್ಮೆ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ಪ್ರಧಾನಿ ಮೋದಿ ಅವರು “ಟೀಕ್ ಹೈ ಆಪ್?” ಎಂದು ಆರೋಗ್ಯ ವಿಚಾರಿಸುತ್ತಿದ್ದ ಸಣ್ಣಪುಟ್ಟ ಮಾತುಕತೆಗಳನ್ನೂ ಕೃತಿಯಲ್ಲಿ ಮೆಲುಕು ಹಾಕಿದ್ದಾರೆ.
ರಾಜಕೀಯ ವೈರಿಗಳಾದರೂ ಪರಸ್ಪರ ಗೌರವ ಹಾಗೂ ಔಪಚಾರಿಕ ಶುಭಾಶಯಗಳ ವಿನಿಮಯ ಹೇಗಿತ್ತು ಎಂಬುದನ್ನು ಈ ಆತ್ಮಕಥೆಯು ತೆರೆದಿಟ್ಟಿದ್ದು, ರಾಜಕೀಯ ವಲಯದಲ್ಲಿ ಸದ್ಯ ಈಗ ಇದು ಹಾಟ್ ಟಾಪಿಕ್ ಆಗಿದೆ ಎಂದು ಹೇಳಬಹುದು.




