ದೀಪಾವಳಿ ಹಬ್ಬ ಅಂದ್ರೆ ಎಲ್ಲರಿಗೂ ಸಂಭ್ರಮ, ಬೆಳಕಿನ ಹಬ್ಬ. ಆದ್ರೆ ಈ ಹಬ್ಬದ ಆಚರಣೆ ಬೆಂಗಳೂರಿನಲ್ಲಿ ಕೆಲವರಿಗೆ ದೊಡ್ಡ ಆತಂಕವನ್ನೇ ತಂದಿಟ್ಟಿದೆ. ಹೌದು ‘ಪಟಾಕಿ ಸಿಡಿಸುವಾಗ ಎಚ್ಚರ ತಪ್ಪಿದ್ದರಿಂದ, ನಗರದ ಎರಡು ಪ್ರಮುಖ ಆಸ್ಪತ್ರೆಗಳಲ್ಲಿ ಒಟ್ಟು 108 ಮಂದಿ ಕಣ್ಣಿಗೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಬರೋಬ್ಬರಿ 51 ಜನ ಹಸುಗೂಸುಗಳು ಹಾಗೂ ಚಿಕ್ಕ ಮಕ್ಕಳು ಇರುವುದು ನಿಜಕ್ಕೂ ವಿಪರ್ಯಾಸ.
ಮಿಂಟೋ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ದಾಖಲಾದ ಈ ಕೇಸ್ಗಳು ನಿಜಕ್ಕೂ ಕಣ್ಣು ತೆರೆಸುವಂತಿವೆ ನೋಡಿ. ಹೌದು ‘ ಮಿಂಟೋದಲ್ಲಿ 44 ಜನ ಹಾಗೂ ನಾರಾಯಣ ನೇತ್ರಾಲಯದಲ್ಲಿ 64 ಮಂದಿ ಪಟಾಕಿ ಗಾಯಗಳಿಂದಾಗಿ ಅಡ್ಮಿಟ್ ಆಗಿದ್ದಾರೆ. ವಿಶೇಷ ಅಂದ್ರೆ, ಗಾಯಗೊಂಡವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಅಂದ್ರೆ 49 ಜನರು ಸ್ವತಃ ಪಟಾಕಿ ಸಿಡಿಸಿದವರಲ್ಲ, ಬದಲಿಗೆ ಪಟಾಕಿ ಸಿಡಿಸ್ತಿದ್ದವರ ಹತ್ತಿರ ನಿಂತಿದ್ದ ಮುಗ್ಧರು! ಬಿಜಿಲಿ ಪಟಾಕಿ, ಆಟಮ್ ಬಾಂಬ್ ಹಾಗೂ ಲಕ್ಷ್ಮಿ ಪಟಾಕಿಗಳು ಈ ಗಾಯಗಳಿಗೆ ಪ್ರಮುಖ ಕಾರಣವಾಗಿದ್ದು, ಈಗಾಗಲೇ 6 ಜನರಿಗೆ ಕಣ್ಣಿನ ಸರ್ಜರಿ ಕೂಡ ಮಾಡಲಾಗಿದೆ.
ಪಟಾಕಿಯ ಕಿಡಿಗಳು ತಾಗಿ ಹಲವರು ತಮ್ಮ ದೃಷ್ಟಿಯನ್ನೇ ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ ಅಂತ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇನ್ನು ಕಣ್ಣಿನ ಗಾಯದ ಜೊತೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕೂಡ ಸಖತ್ ಹದಗೆಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಗರದಲ್ಲಿ ವಾಯು ಮಾಲಿನ್ಯ ಬರೋಬ್ಬರಿ ಶೇ. 25ರಷ್ಟು ಹೆಚ್ಚಾಗಿದೆಯಂತೆ! ಪಟಾಕಿಯ ಹೊಗೆಯಿಂದಾಗಿ ಮೆಜೆಸ್ಟಿಕ್, ಕೋರಮಂಗಲ ಹಾಗೂ ಸಿಲ್ಕ್ ಬೋರ್ಡ್ನಂತಹ ಏರಿಯಾಗಳಲ್ಲಿ AQI ಮೌಲ್ಯ 200ರ ಗಡಿ ದಾಟಿದೆ.
ಹಬ್ಬದ ಜೋಶ್ನಲ್ಲಿ ನಾವೆಲ್ಲಾ ಮರೆಯುವ ಸಣ್ಣ ನಿರ್ಲಕ್ಷ್ಯ ಎಷ್ಟು ದೊಡ್ಡ ಪ್ರಾಣ ಹಾಗೂ ಆರೋಗ್ಯದ ಸಮಸ್ಯೆ ತಂದೊಡ್ಡುತ್ತೆ ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿ. ಮುಂದಿನ ದಿನಗಳಲ್ಲಾದರೂ ಹಬ್ಬಗಳನ್ನು ಆಚರಿಸುವಾಗ ಮಕ್ಕಳಿಗೆ ಎಚ್ಚರಿಕೆ ನೀಡಿ, ಸ್ವಲ್ಪ ಜಾಗರೂಕತೆಯಿಂದಿರಲು ಸಲಹೆ ಕೊಟ್ಟರೆ ಒಳ್ಳೆಯದು.




