Political News: ಬಸವಣ್ಣನವರ ಬಗ್ಗೆ ಕೃತಿ ರಚಿಸಿ, ಆ ಕೃತಿಯಲ್ಲಿ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಕೃತಿಕಾರ ರವಿ ಹಂಜ್ ವಿರುದ್ಧ ಆರೋಪ ಕೇಳಿ ಬಂದಿದೆ.
ಈ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಕ್ರಮ ಕೈಗ“ಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಲಿಂಗಭೇದ, ವರ್ಣಭೇದ ಹಾಗೂ ವರ್ಗಭೇದ ರಹಿತವಾದ ಸಮಾಜ ನಿರ್ಮಾಣದ ಬೋಧನೆ ಮಾಡಿದ ಜಗಜ್ಯೋತಿ ಬಸವಣ್ಣನವರು ವೀರಶೈವ ಲಿಂಗಾಯತ ಸಮುದಾಯದ ಅಸ್ಮಿತೆಯಾಗಿದ್ದಾರೆ. ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಚಿಂತನೆಗಳು ಮತ್ತು ಅವರ ಬದುಕಿನ ಸಂದೇಶಗಳು ಕಾಲಾತೀತವಾದುದು. ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ಅಥವಾ ಕೃತಿಗಳನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಸದ್ಯ ಚರ್ಚೆ ಆಗುತ್ತಿರುವ ವಿವಿಧಾತ್ಮಕ ಕೃತಿಯಲ್ಲಿ ಕೃತಿಕಾರ ರವಿ ಹಂಜ್ ಅವರು ಬಸವಣ್ಣನವರ ಗೌರವಕ್ಕೆ ಮತ್ತು ಚಿಂತನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಮಂಡಿಸಿರುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ವಿವಾದಾತ್ಮಕ ಕೃತಿ ಕುರಿತಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಜಗತ್ತಿಗೆ ಧರ್ಮದ ಮೂಲಕ ಶಾಂತಿಯನ್ನು ಸಾರಿದ ಬಸವಣ್ಣನವರ ಸಾರ್ವಕಾಲಿಕ ಚಿಂತನೆಗಳು ಮುಂದಿನ ಜನಾಂಗಕ್ಕೂ ದಾರಿ ದೀಪ ಆಗಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಸರ್ಕಾರ ಬಸವಣ್ಣನವರನ್ನು ಕೇವಲ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು. ಬಸವಣ್ಣನವರ ಚಿಂತನೆ ಮತ್ತು ಸಿದ್ಧಾಂತಗಳಿಗೆ ಪೂರಕವಾಗಿಯೂ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಬೇಕು. ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲ ಹಾಕಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.




