ಬೆಂಗಳೂರು ಜಾತ್ರೆಗಿಂತ ಮೊದಲು ಬೆಂಗಳೂರಿಗರ ಜಂಜಾಟಕ್ಕೆ ಮುಕ್ತಿ ಕೊಡಿ ಸ್ವಾಮಿ!: ಆರ್.ಅಶೋಕ್ ವ್ಯಂಗ್ಯ

Political News: ಕಾಂಗ್ರೆಸ್ ಸರ್ಕಾರ ಈ ಬಾರಿ ಬೆಂಗಳೂರಿನಲ್ಲಿ ಬೆಂಗಳೂರು ಜಾತ್ರೆ ನಡೆಸುವ ನಿರ್ಧಾರ ಮಾಡಿದ್ದು, ಸಿದ್ಧತೆ ಭರದಿಂದ ಸಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಬೆಂಗಳೂರು ಜಾತ್ರೆಗೆ ವಿರೋಧ ವ್ಯಕ್ತಪಡಿಸುತ್ತಿದೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯ ಮೂಲಕ ಕಿಡಿ ಕಾರಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರೀಲ್ಸ್ ಮಂತ್ರಿ ಕೃಷ್ಣಭೈರೇಗೌಡ ಅವರೇ, ಬೆಂಗಳೂರಿನ ಜನರ ಕಣ್ಣಿಗೆ ಮಣ್ಣೆರಚಲು ಜಾತ್ರೆಯೇ ನಿಮ್ಮ ಹೊಸ ಗಿಮಿಕ್ಕಾ? ಒಂದು ಕಡೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿ ಬೆಂಗಳೂರು ಜಾತ್ರೆ ಆಚರಣೆ. ಮತ್ತೊಂದು ಕಡೆ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಬೆಂಗಳೂರಿಗರು! ಇಷ್ಟಕ್ಕೂ ಯಾವ ಪುರುಷಾರ್ಥಕ್ಕೆ ಈ ಬೆಂಗಳೂರು ಜಾತ್ರೆ? ಯಾವ ಸಾಧನೆಗೆ ಈ ಸಂಭ್ರಮಾಚರಣೆ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿಗರಿಗೆ ಬೇಕಿರುವುದು ಜಾತ್ರೆಯಲ್ಲ; ಸುಗಮ ಸಂಚಾರ, ಗುಂಡಿಗಳಿಲ್ಲದ ರಸ್ತೆಗಳು, ಸ್ವಚ್ಛ ಪರಿಸರ, ನಿರಂತರ ಕುಡಿಯುವ ನೀರು, ಸಮರ್ಪಕ ಒಳಚರಂಡಿ ಮತ್ತು ಉತ್ತಮ ನಾಗರಿಕ ಸೌಲಭ್ಯಗಳು. ಕಲಾವಿದರಿಗೆ ವೇದಿಕೆ ಕಲ್ಪಿಸುವುದಕ್ಕೆ ನಮ್ಮ ವಿರೋಧವಿಲ್ಲ. ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಕಲಾವಿದರನ್ನು ಗೌರವಿಸುವುದು ಸ್ವಾಗತಾರ್ಹ. ಆದರೆ ಅದನ್ನೇ ಆಡಳಿತದ ವೈಫಲ್ಯಗಳನ್ನು ಮುಚ್ಚಿಹಾಕುವ ರಾಜಕೀಯದ ವೇದಿಕೆಯನ್ನಾಗಿ ಮಾಡಬೇಡಿ.

ಈ ಜಾತ್ರೆ ಮುಗಿದ ಮರುದಿನ ಬೆಂಗಳೂರಿನ ರಸ್ತೆಗಳು ಗುಂಡಿಮುಕ್ತವಾಗುತ್ತವೆಯೇ? ಕಸದ ಸಮಸ್ಯೆ ಬಗೆಹರಿಯುತ್ತದೆಯೇ? ಟ್ರಾಫಿಕ್ ಕಡಿಮೆಯಾಗುತ್ತದೆಯೇ? ಕುಡಿಯುವ ನೀರು ಸಿಗುತ್ತದೆಯೇ? ನಿಮಗೆ ಬೆಂಗಳೂರು ಜಾತ್ರೆ 13 ದಿನಗಳ 20 ಕೋಟಿ ವೆಚ್ಚದ ಸಂಭ್ರಮ ಇರಬಹುದು. ಆದರೆ ಬೆಂಗಳೂರಿಗರ ಸಂಕಷ್ಟಕ್ಕೆ 365 ದಿನಗಳೂ ಮುಕ್ತಿಯಿಲ್ಲ! ರೀಲ್ಸ್ ಮಾಡುವುದರಲ್ಲಿ, ಜಾತ್ರೆ ಮಾಡುವುದರಲ್ಲಿ ತೋರುವ ಉತ್ಸಾಹವನ್ನು ನಗರದ ಅಭಿವೃದ್ಧಿ ಮಾಡುವುದರಲ್ಲೂ ತೋರಿಸಿ ಎಂದು ಆರ್.ಅಶೋಕ್ ಸವಾಲ್ ಹಾಕಿದ್ದಾರೆ.

ಬೆಂಗಳೂರಿಗೆ ಜಾತ್ರೆಯ ಆಡಳಿತ ಬೇಕಿಲ್ಲ, ಜವಾಬ್ದಾರಿಯುತ ಆಡಳಿತ ಬೇಕು! ರೀಲ್ಸ್, ಜಾತ್ರೆ, ಪ್ರಚಾರಗಳಿಂದ ಬೆಂಗಳೂರಿನ ಅಭಿವೃದ್ಧಿಯಾಗುವುದಿಲ್ಲ ಕೃಷ್ಣ ಬೈರೇಗೌಡರೇ! ಅದಕ್ಕೆ ಇಚ್ಛಾಶಕ್ತಿ, ದೂರದೃಷ್ಟಿ ಮತ್ತು ಜವಾಬ್ದಾರಿಯುತ ಆಡಳಿತ ಬೇಕು. ಬೆಂಗಳೂರಿಗರು ನಿಮ್ಮ ಜಾತ್ರೆಯ ಪ್ರೇಕ್ಷಕರಲ್ಲ. ನಿಮ್ಮ ವೈಫಲ್ಯಗಳಿಗೆ ಪ್ರತಿದಿನ ಬೆಲೆ ತೆರುತ್ತಿರುವ ತೆರಿಗೆದಾರರು! ಜಾತ್ರೆಯ ಸಂಭ್ರಮದ ಹಿಂದೆ ಆಡಳಿತದ ವೈಫಲ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಬೆಂಗಳೂರಿಗೆ ಜಾತ್ರೆಯ ಗಿಮಿಕ್ ಬೇಡ, ಜವಾಬ್ದಾರಿಯುತ ಆಡಳಿತ ಬೇಕು! ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author