ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಇತ್ತೀಚೆಗೆ ನಿಧನರಾಗಿದ್ದಾರೆ. ಆದ್ರೆ ತಾಯಿಯ ಅಂತ್ಯಕ್ರಿಯೆ ಮುಗಿಸಿ ಲಖನೌಗೆ ಮರಳಿದ ಬೆನ್ನಲ್ಲೇ ಯೋಗಿ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಸೂತಕದ ವೇಳೆ ಪೂಜೆಯಲ್ಲಿ ಪಾಲ್ಗೊಳ್ಳಬಹುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಹಾಗಾದ್ರೆ ಸನ್ಯಾಸಿಗಳಿಗೆ ಸೂತಕ ಅನ್ವಯವಾಗುತ್ತಾ? ಧರ್ಮಶಾಸ್ತ್ರ ಏನು ಹೇಳುತ್ತೆ? ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ..
ಹೌದು, ನವೆಂಬರ್ 20ರಂದು ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ನಿಧನರಾಗಿದ್ದರು. ಹರಿದ್ವಾರದ ಚಂಡಿಘಾಟ್‌ನಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಯೋಗಿ, ಲಖನೌಗೆ ವಾಪಸಾದ ಬಳಿಕ ಸರ್ಕಾರಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೊಂಡೆ ಪಾಟೀಲ್, ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು ನಿಧನರಾದರೆ 13 ದಿನ ಸೂತಕವಿರುತ್ತದೆ, ಈ ವೇಳೆ ಪೂಜೆಯಲ್ಲಿ ಭಾಗವಹಿಸುವುದು ಸರಿಯೇ, ಯೋಗಿ ಅವರ ಹಿಂದುತ್ವವೇ ಬೇರೆ ಇರಬಹುದು ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ವಕ್ತಾರರ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಧರ್ಮಶಾಸ್ತ್ರದ ಬಗ್ಗೆ ತಿಳಿಯದೆ ಮಾತನಾಡಬೇಡಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಸನ್ಯಾಸತ್ವ ಸ್ವೀಕರಿಸಿದವರಿಗೆ ಜನನ-ಮರಣದ ಸೂತಕ ಅನ್ವಯಿಸುವುದಿಲ್ಲ. ಸನ್ಯಾಸ ದೀಕ್ಷೆ ಪಡೆಯುವಾಗಲೇ ‘ವಿರಜಾ ಹೋಮ’ ಅಂದ್ರೆ ಆತ್ಮಶ್ರಾದ್ಧ ಮಾಡಿಕೊಳ್ಳುವ ಮೂಲಕ ಪೂರ್ವಾಶ್ರಮದ ಎಲ್ಲಾ ಸಂಬಂಧಗಳನ್ನು ತ್ಯಜಿಸಿರುತ್ತಾರೆ.
ಹೀಗಾಗಿ ಸನ್ಯಾಸಿಗಳು ಪೂರ್ವಾಶ್ರಮದ ತಂದೆ-ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದೇ ಹೊರತು, ತಲೆ ಬೋಳಿಸಿಕೊಳ್ಳುವುದು, ಪಿಂಡಪ್ರದಾನ ಮಾಡುವಂತಿಲ್ಲ ಮತ್ತು ಅವರಿಗೆ ಯಾವುದೇ ಸೂತಕ ಇರುವುದಿಲ್ಲ ಎಂದು ಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ ಎಂದಿದ್ದಾರೆ. ಹಾಗಾಗಿ ಯೋಗಿ ಆದಿತ್ಯನಾಥ್ ಅವರ ಪೂಜೆಯನ್ನು ಪ್ರಶ್ನಿಸಲು ಹೋಗಿ ಕಾಂಗ್ರೆಸ್ ವಕ್ತಾರರು ಈಗ ನೆಟ್ಟಿಗರಿಂದಲೇ ಟ್ರೋಲ್ ಆಗುತ್ತಿದ್ದಾರೆ.




