ಮಾಸಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇದೀಗ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎಸ್ ‘ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಸಹ ಆರೋಗ್ಯ ಇಲಾಖೆ ನಡೆಯುತ್ತೆ ಅಂತ ಖಾದರ್ ಗರಂ ಆಗಿದ್ದಾರೆ.
ಹೌದು, ಕಳೆದ ಹತ್ತು ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯದಲ್ಲಿ ಆರೋಗ್ಯ ಇಲಾಖೆ ಯಾವುದೇ ಸಮಸ್ಯೆಗೆ ಸಿಲುಕಿಲ್ಲ, ಹಳ್ಳಿಗಳಲ್ಲೂ ಏನೂ ತೊಂದರೆಯಾಗಿಲ್ಲ ಅಂತ ಸಚಿವರು ಹೇಳಿದ್ದಾರೆ. ಆಶಾಗಳ ಸೇವೆ ಇಲ್ಲ ಅಂದ್ರೂ ಆರೋಗ್ಯ ಇಲಾಖೆ ನಡೆಯುತ್ತೆ ಅನ್ನೋದನ್ನ ಅವರೇ ತೋರಿಸಿಕೊಟ್ಟಿದ್ದಾರೆ, ಹೆರಿಗೆ ಸೇರಿದಂತೆ ಎಲ್ಲಾ ಕೆಲಸಗಳು ನಡೀತಿವೆ ಅಂತ ಖಾದರ್ ಕಿಡಿಕಾರಿದ್ದಾರೆ.
ಇನ್ನು ಇದರ ಜೊತೆಗೆ ‘ಆಶಾಗಳು ಇಲ್ಲ ಅಂದ್ರೆ ಆಸ್ಪತ್ರೆಗಳಲ್ಲಿ ಡಾಕ್ಟರ್ ಇಲ್ವಾ? ನರ್ಸ್ ಇಲ್ವಾ? ಅಂತ ಪ್ರಶ್ನಿಸಿರುವ ಖಾದರ್, ನೆರೆಯ ತಮಿಳುನಾಡಿನ ಉದಾಹರಣೆ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಇದೆ, ಅಲ್ಲಿ ಎಲ್ಲವೂ ಚೆನ್ನಾಗಿದೆ ಅಲ್ವಾ ಅಂತ ತಿರುಗೇಟು ನೀಡಿದ್ದಾರೆ.
ಇನ್ನು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳದ ಬೇಡಿಕೆ ಬಗ್ಗೆಯೂ ಖಾರವಾಗಿ ಪ್ರತಿಕ್ರಿಯಿಸಿದ ಖಾದರ್, ನರ್ಸ್ಗಳಿಗೆ 10 ಸಾವಿರ, ಶಿಕ್ಷಕರಿಗೆ 12 ಸಾವಿರ ಹಾಗೂ ಆರೋಗ್ಯ ಸಹಾಯಕರಿಗೆ 4,500 ರೂಪಾಯಿ ಸಂಬಳ ಇದೆ. ಹೀಗಿರುವಾಗ ಇವರಿಗೆ 15 ಸಾವಿರ ರೂಪಾಯಿ ಕೊಡಬೇಕಾ ಅಂತ ಸಚಿವರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ‘ನ್ಯಾಯಯುತ ಬೇಡಿಕೆಗಾಗಿ ಬೀದಿಗಿಳಿದಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಆರೋಗ್ಯ ಸಚಿವರ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮುಂದೆ ಈ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.




