ದೊಡ್ಡಮನೆಯಲ್ಲಿ ಸಿಂಪಲ್ ಕಲ್ಯಾಣ – ದಾಂಪತ್ಯಕ್ಕೆ ಕಾಲಿಟ್ಟ ಕಾಂಗ್ರೆಸ್ ಶಾಸಕ!

ರಾಜಕೀಯದ ಆಡಂಬರದ ನಡುವೆ ಸರಳತೆಗೆ ಸಾಕ್ಷಿಯಾದ ಮದುವೆ ಸಂಭ್ರಮ.. ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿ, ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರದ ಜಾನಪದ ಲೋಕದ ದೊಡ್ಡಮನೆಯಲ್ಲಿ ಡಾ. ಶ್ರೀನಿಧಿ ಅವರ ಕೈ ಹಿಡಿದು ಹೊಸ ಬದುಕು ಆರಂಭಿಸಿದ್ದಾರೆ. ರಾಜಕೀಯ ನಾಯಕನ ಈ ಸರಳ ಮದುವೆ ಈಗ ಎಲ್ಲೆಡೆ ಗಮನ ಸೆಳೆದಿದೆ ನೋಡಿ..

ಹೌದು, ಯಾವುದೇ ಆಡಂಬರವಿಲ್ಲದೆ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಈ ಸರಳ ಮದುವೆ ಶಾಸ್ತ್ರ ನೆರವೇರಿದ್ದು, ದೊಡ್ಡಮನೆಯಲ್ಲಿ ಮದುವೆ ಸಂಭ್ರಮ ನಡೆದ ಬಳಿಕ, ಅಲ್ಲೇ ಇರುವ ಬಯಲು ರಂಗಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮದುವೆ ಹಿನ್ನೆಲೆಯಲ್ಲಿ ಜಾನಪದ ಲೋಕದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿತ್ತು.

ಇನ್ನು, ನವದಂಪತಿಗೆ ಶುಭ ಹಾರೈಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿದ್ದರು. ಚನ್ನಪಟ್ಟಣದ ಪಿಟಿಎಸ್ ಆವರಣದ ಹೆಲಿಪ್ಯಾಡ್‌ಗೆ ಬಂದಿಳಿದ ಸಿಎಂ, ರಸ್ತೆ ಮೂಲಕ ಜಾನಪದ ಲೋಕಕ್ಕೆ ಭೇಟಿ ನೀಡಿ ದರ್ಶನ್ ಧ್ರುವನಾರಾಯಣ್ ಮತ್ತು ಡಾ. ಶ್ರೀನಿಧಿ ಅವರಿಗೆ ಶುಭ ಕೋರಿದ್ದಾರೆ. ಬಳಿಕ ಹೆಲಿಪ್ಯಾಡ್ ಮೂಲಕ ಮೈಸೂರಿನತ್ತ ಪ್ರಯಾಣ ಬೆಳೆಸಿದರು ಎನ್ನಲಾಗಿದೆ.

ಸದ್ಯ ‘ಮಂತ್ರ ಮಾಂಗಲ್ಯದ ಸರಳ ವಿವಾಹದ ಮೂಲಕ ಸಮಾಜಕ್ಕೆ ಮಾದರಿಯಾದ ಶಾಸಕ ದರ್ಶನ್ ಧ್ರುವನಾರಾಯಣ್ ದಂಪತಿಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

About The Author