ವಿಶ್ವ ಸಂವಿಧಾನ ದಿನದಂದು ಬಸವಣ್ಣನವರ ಪರ ಸಂಘಟನೆಗಳ ಸಮರ – ರವಿ ಹಂಜ್ ವಿರುದ್ಧ ಆಕ್ರೋಶ

Hubli News: ಒಂದೆಡೆ ವಿಶ್ವ ಸಂವಿಧಾನ ದಿನದ ಆಚರಣೆ… ಮತ್ತೊಂದೆಡೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ವಿರುದ್ಧ ಆಕ್ರೋಶ. ಹೀಗಾಗಿ ವಿಶ್ವ ಸಂವಿಧಾನ ದಿನದಂದೇ ಹುಬ್ಬಳ್ಳಿಯಲ್ಲಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟಗಳು ಒಂದಾಗಿ ಬೀದಿಗಿಳಿದಿವೆ. ರವಿ ಹಂಜ್ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹನ ಮಾಡುವ ಮೂಲಕ ಕಾನೂನು ಕ್ರಮಕ್ಕೆ ಆಗ್ರಹಿಸಿವೆ. ಅಷ್ಟಕ್ಕೂ ಸಂವಿಧಾನದ ಆಶಯಗಳಿಗೂ ಬಸವಣ್ಣನವರ ವಿಚಾರಧಾರೆಗೂ ಇರುವ ಸಾಮ್ಯವೇನು? ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವೇನು? ಈ ಕುರಿತ ಸ್ಪೆಷಲ್ ರಿಪೋರ್ಟ್.

ಇದು ವಿಶ್ವ ಸಂವಿಧಾನ ದಿನ… ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಸ್ವಾತಂತ್ರ್ಯ, ನ್ಯಾಯ ಮತ್ತು ಘನತೆಯನ್ನು ಖಾತರಿಪಡಿಸುವ ಸಂವಿಧಾನವನ್ನು ಸ್ಮರಿಸುವ ದಿನ. ಇದೇ ದಿನ ಹುಬ್ಬಳ್ಳಿಯಲ್ಲಿ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಪರವಾಗಿ ಜನಪರ ಸಂಘಟನೆಗಳು ಒಗ್ಗಟ್ಟಿನ ಧ್ವನಿ ಎತ್ತಿವೆ.

ರವಿ ಹಂಜ್ ಅವರು ಬಸವಣ್ಣನವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟಗಳು ಒಂದಾಗಿ ಪ್ರತಿಭಟನೆಗೆ ಇಳಿದಿವೆ.

12ನೇ ಶತಮಾನದಲ್ಲೇ ಸಮಾಜದಲ್ಲಿ ಬೇರೂರಿದ್ದ ಜಾತಿ ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಬಸವಣ್ಣನವರು ಧ್ವನಿ ಎತ್ತಿದ್ದರು. ಕಾಯಕವೇ ಕೈಲಾಸ, ದಾಸೋಹವೇ ಧರ್ಮ ಎಂಬ ತತ್ವದ ಮೂಲಕ ದುಡಿಮೆಗೆ ಗೌರವ, ಹಂಚಿ ಬದುಕುವ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ್ದರು.

ಅನುಭವ ಮಂಟಪದ ಮೂಲಕ ಎಲ್ಲ ವರ್ಗದ ಜನರಿಗೆ ವಿಚಾರ ವಿನಿಮಯದ ವೇದಿಕೆ ಕಲ್ಪಿಸಿ, ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಇಂತಹ ಬಸವಣ್ಣನವರ ವಿಚಾರಧಾರೆ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.

ಇಂತಹ ಮಹಾನ್ ಸಮಾಜ ಸುಧಾರಕರ ಕುರಿತು ರವಿ ಹಂಜ್ ನೀಡಿರುವ ಹೇಳಿಕೆ ಬಸವಾನುಯಾಯಿಗಳು ಮತ್ತು ಜನಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು.

ಕೈಯಲ್ಲಿ ಬಸವಣ್ಣನವರ ಭಾವಚಿತ್ರ, ಪ್ರತಿಭಟನಾ ಫಲಕಗಳನ್ನು ಹಿಡಿದು ರಸ್ತೆಗಿಳಿದ ಕಾರ್ಯಕರ್ತರು, ರವಿ ಹಂಜ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿಯತ್ತ ಸಾಗಿದರು.

ವಿಶೇಷ ಅಂದ್ರೆ, ವಿಶ್ವ ಸಂವಿಧಾನ ದಿನದಂದೇ ನಡೆದ ಈ ಪ್ರತಿಭಟನೆಯಲ್ಲಿ ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ನ್ಯಾಯ ಮತ್ತು ಪ್ರತಿಯೊಬ್ಬರ ಘನತೆಯ ಬದುಕಿನ ವಿಚಾರಗಳು ಪ್ರಮುಖವಾಗಿ ಪ್ರತಿಧ್ವನಿಸಿದವು.

ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಇರಬೇಕು. ಅದೇ ರೀತಿ ಅಭಿವ್ಯಕ್ತಿಯ ಹೆಸರಿನಲ್ಲಿ ಮತ್ತೊಬ್ಬರ ಗೌರವ ಮತ್ತು ಭಾವನೆಗಳಿಗೆ ಧಕ್ಕೆ ಉಂಟಾಗುವ ಆರೋಪಗಳಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ನಡೆಯಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿತ್ತು.

ಇನ್ನು ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಿದ್ದು, ರವಿ ಹಂಜ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು. ಅವರ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಹೇಳಿಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧ ಮಠಗಳ ಮಠಾಧೀಶರು, ಜನಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಒಂದೆಡೆ ಸಂವಿಧಾನದ ಆಶಯಗಳ ಸ್ಮರಣೆ, ಮತ್ತೊಂದೆಡೆ ಬಸವಣ್ಣನವರ ಸಮಾನತೆಯ ತತ್ವದ ಪರ ಹೋರಾಟ. ಹೀಗೆ ವಿಶ್ವ ಸಂವಿಧಾನ ದಿನದಂದು ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ಇದೀಗ ಗಮನ ಸೆಳೆದಿದೆ.

ಸಂವಿಧಾನ ಹೇಳುವ ಸಮಾನತೆ ಮತ್ತು ಬಸವಣ್ಣನವರು ಸಾರಿದ ಮಾನವೀಯತೆಯ ಮೌಲ್ಯಗಳು ಸಮಾಜದ ಎರಡು ಮಹತ್ವದ ದಾರಿದೀಪಗಳು. ಇಂತಹ ಮೌಲ್ಯಗಳಿಗೆ ಗೌರವ ಸಿಗಬೇಕು ಎಂಬ ಆಗ್ರಹದೊಂದಿಗೆ ಜನಪರ ಸಂಘಟನೆಗಳು ಒಂದಾಗಿ ಧ್ವನಿ ಎತ್ತಿವೆ. ಇದೀಗ ರವಿ ಹಂಜ್ ವಿರುದ್ಧದ ಮನವಿಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author