ನಾರಿ ಶಕ್ತಿಗೆ ಬರಲಿದೆ ಬಂಪರ್ ಗಿಫ್ಟ್ – ಮಾತು ಉಳಿಸಿಕೊಳ್ಳುತ್ತೇವೆಂದ ಮೋದಿ!

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಪೂರಕವಾದ ಪರಿಷ್ಕೃತ ಸಂವಿಧಾನ ತಿದ್ದುಪಡಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಜಾರಿಗೆ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದು, ವಿರೋಧಿಸುವ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಸ್ ‘ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವುದನ್ನು ತಡೆಯಲು ವಿರೋಧ ಪಕ್ಷಗಳಿಂದ ಸಾಧ್ಯವಿಲ್ಲ, ಅದು ಕಾಲದ ವಿಷಯವಷ್ಟೇ ಎಂದಿದ್ದಾರೆ. ಪರಿಷ್ಕೃತ ಪ್ರಸ್ತಾವನೆಯಡಿ ಲೋಕಸಭೆಯ ಗರಿಷ್ಠ ಬಲವನ್ನು 850ಕ್ಕೆ ಹಾಗೂ ವಿಧಾನಸಭೆಗಳ ಗರಿಷ್ಠ ಬಲವನ್ನು 500ರಿಂದ 650ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಂಡು 2051ರವರೆಗೆ ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯನ್ನು ಯಥಾಸ್ಥಿತಿಯಲ್ಲಿ ಉಳಿಸುವ ಪ್ರಸ್ತಾವನೆ ಇದರಲ್ಲಿದೆ ಅಂತ ಮೋದಿ ಬರೆದುಕೊಂಡಿದ್ದಾರೆ.

ಇನ್ನು ಇದರ ಜೊತೆಗೆ ‘ಕಳೆದ ಏಪ್ರಿಲ್‌ನಲ್ಲಿ ಹಿಂದಿನ ತಿದ್ದುಪಡಿ ಮಸೂದೆಗೆ ಅಗತ್ಯ ಬಹುಮತ ಸಿಗದ ಹಿನ್ನೆಲೆಯಲ್ಲಿ ಈ ಹೊಸ ಮಸೂದೆಗಳನ್ನು ತರಲಾಗಿದೆ. ಇದೇ ವೇಳೆ, ಜಂಟಿ ಕಾರ್ಯತಂತ್ರ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಸಭೆ ನಡೆಸಿದ್ದಾರೆ. 850 ಸದಸ್ಯ ಬಲದ ಲೋಕಸಭೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವೇ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದು, ಸರ್ಕಾರದ ಉದ್ದೇಶ ಕೇವಲ ಮಹಿಳಾ ಮೀಸಲಾತಿಗಷ್ಟೇ ಸೀಮಿತವಲ್ಲ ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಸುತ್ತ ಆಡಳಿತ ಮತ್ತು ವಿಪಕ್ಷಗಳ ನಡುವೆ ಚರ್ಚೆ ತೀವ್ರಗೊಂಡಿದ್ದು, ಮುಂದಿನ ಸಂಸದೀಯ ಕಲಾಪಗಳತ್ತ ಎಲ್ಲರ ಗಮನ ನೆಟ್ಟಿದೆ..

About The Author