ಬಿಸ್ಲೆರಿ ನೀರಿನಲ್ಲೂ ಕಲುಷಿತ ಅಂಶ? ಪರೀಕ್ಷಾ ವರದಿ ಆತಂಕಕಾರಿ!

ಬಾಟಲಿ ನೀರು ಅಂದ್ರೆ ನೆನಪಾಗೋದು ಬಿಸ್ಲೆರಿ. ಆದ್ರೆ ಇದೇ ಬಿಸ್ಲೆರಿ ಕಂಪನಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕರ್ನಾಟಕದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲೂ ಬಿಸ್ಲೆರಿ ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾಗಿದೆ. ನೀರಿನಲ್ಲಿ ಹಾನಿಕಾರಕ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದನ್ನು ಪ್ರಯೋಗಾಲಯಗಳು ದೃಢಪಡಿಸಿವೆ.

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದ ಬಿಸ್ಲೆರಿ ಘಟಕದಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ನೀರಿನ ಮಾದರಿ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ ಎನ್ನುವುದು ಬಹಿರಂಗವಾಗಿದೆ. ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಒಳಚರಂಡಿ ಸೋರಿಕೆ ಅಥವಾ ಹಾನಿಗೊಳಗಾದ ಪೈಪ್‌ಗಳ ಮೂಲಕ ನೀರನ್ನು ಸೇರುವ ಸಾಧ್ಯತೆ ಇದೆ. ಹೀಗಾಗಿ ನೀರಿನ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತವಾಗಿದೆ.

ಈಗಾಗಲೇ 2026ರ ಆಗಸ್ಟ್ 12ರಂದು ಸಂಬಂಧಪಟ್ಟ ಬ್ಯಾಚ್‌ನ ಮಾರಾಟಕ್ಕೆ ಪ್ರಾಧಿಕಾರ ನಿರ್ಬಂಧ ವಿಧಿಸಿತ್ತು. ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿದೆ. ಇನ್ನು ಗೋವಾ ಘಟಕದ ನೀರಿನ ಮಾದರಿಯೂ ಈ ಹಿಂದೆ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದರೆ ಕಂಪನಿ ತನ್ನ ಉತ್ಪನ್ನಗಳು ಬಳಕೆಗೆ ಸುರಕ್ಷಿತ ಎಂದು ಸ್ಪಷ್ಟನೆ ನೀಡಿತ್ತು. ಒಟ್ಟಿನಲ್ಲಿ, ಬಿಸ್ಲೆರಿ ನೀರಿನ ಗುಣಮಟ್ಟದ ಸುತ್ತ ಇದೀಗ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.

About The Author