ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆ ಹಾನಿಗೊಳಗಾದ ಸಂತ್ರಸ್ತರು ವಿಪತ್ತು ಪರಿಹಾರದಿಂದ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಕೈಗೊಂಡಿದ್ದ ಅತಿವೃಷ್ಟಿಯಿಂದ ಉಂಟಾದ ಬೆಳೆ ಮತ್ತು ಮನೆ ಹಾನಿಗೆ ಪರಿಹಾರ ನೀಡುವ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಅ.1 ರಿಂದ ನ.21ರವರೆಗೆ ಅತಿವೃಷ್ಟಿಯಿಂದಾಗಿ ಬೆಳೆ ಮತ್ತು ಮನೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನ.30 ರ ಒಳಗೆ ಪರಿಹಾರ ಪೋರ್ಟಲ್ ತಂತ್ರಾಂಶ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ದತ್ತಾಂಶವನ್ನು ನಮೂದಿಸಬೇಕು ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಲೋಕೋಪಯೋಗಿ, ಪಿಆರ್‌ಇಡಿ ಸೇರಿ ಇತರ ಇಲಾಖೆಗಳು ಜಂಟಿ ಸಮೀಕ್ಷೆಯನ್ನು ನಡೆಸಿ, ಸಂತ್ರಸ್ತರ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದರು. ಹಾನಿಯಾಗಿರುವ ಮನೆಗಳ ಜಂಟಿ ಸಮೀಕ್ಷೆಯ ಮಾಹಿತಿಯನ್ನು ಪರಿಹಾರ ಪೋರ್ಟಲ್ ನಲ್ಲಿ ನಮೂದಿಸಲಿದ್ದು ಇದನ್ನು ಪರಿಶೀಲಿಸಿ ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರಿಗೆ 95,100 ರೂ, ಸಿ ವರ್ಗದ ಮನೆಗಳ ಮಾಲೀಕರಿಗೆ 50 ಸಾವಿರ ರೂ. ಹಾಗೂ ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳ ಹಾನಿಗೆ 10 ಸಾವಿರ ರೂ. ತುರ್ತು ಪರಿಹಾರವನ್ನು ಸಂತ್ರಸ್ತರಿಗೆ ನೇರವಾಗಿ ವಿತರಿಸಲಾಗುತ್ತದೆ. ಮೊದಲನೇ ಕಂತಿನ ಭಾಗವಾಗಿ 95,100 ರೂ ಪರಿಹಾರವನ್ನು ಪಡೆದ ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರಿಗೆ ಉಳಿಕೆ ಪರಿಹಾರವನ್ನು ಹಂತ ಹಂತವಾಗಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ತಂತ್ರಾಂಶದ ಮೂಲಕ ಸಂಬಂಧಪಟ್ಟ ಸಂತ್ರಸ್ತರಿಗೆ ನೇರವಾಗಿ ಡೆಬಿಟ್ ಮಾಡಲಾಗುತ್ತದೆ.