ನವದೆಹಲಿ:ದೆಹಲಿಯಲ್ಲಿ ಕೋವಿಡ್ -19 ಸೋಂಕು ತಗುಲಿದ ಕನಿಷ್ಠ 12 ಜನರು ಓಮಿಕ್ರಾನ್ ರೂಪಾಂತರವನ್ನು ಪಡೆದಿದ್ದಾರೆ ಎಂದು ಶಂಕಿಸಲಾಗಿದೆ ಮತ್ತು ಅವರನ್ನು ನಗರದ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎ.ನ.ಐ ವರದಿ ತಿಳಿಸಿದೆ. ನಿನ್ನೆ ಎಂಟು ‘ಶಂಕಿತ ಓಮಿಕ್ರಾನ್ ರೋಗಿಗಳನ್ನು’ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ನಾಲ್ವರು ಶಂಕಿತರನ್ನು ದಾಖಲು ಮಾಡಲಾಗಿದೆ. ಅದರಲ್ಲಿ ಇಬ್ಬರಿಗೆ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದ್ದು, ಉಳಿದ ಇಬ್ಬರ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ವರು ಶಂಕಿತರಲ್ಲಿ ಇಬ್ಬರು ಯುಕೆ ಯಿಂದ ಬಂದವರು, ಒಬ್ಬರು ಫ್ರಾನ್ಸ್‌ನಿಂದ ಮತ್ತು ಒಬ್ಬರು ನೆದರ್‌ಲ್ಯಾಂಡ್‌ನಿಂದ ಬಂದವರು. ಎಲ್ಲಾ ನಾಲ್ಕು ರೋಗಿಗಳ ಮಾದರಿಗಳನ್ನು ಅವರು ಕರೋನವೈರಸ್‌ನ ಓಮಿಕ್ರಾನ್ ರೂಪಾಂತರವನ್ನು ಹೊಂದಿದ್ದಾರೆಯೇ ಎಂದು ನಿರ್ಧರಿಸಲು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತದೆ.
ಕರ್ನಾಟಕದಲ್ಲಿ SARS-CoV-2 ಓಮಿಕ್ರಾನ್ (B.1.1.529) ರೂಪಾಂತರದ ಮೊದಲ ಪ್ರಕರಣಗಳನ್ನು ಭಾರತ ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇಬ್ಬರು ಓಮಿಕ್ರಾನ್ ಸೋಂಕಿತ ರೋಗಿಗಳಲ್ಲಿ, ಒಬ್ಬರು ಬೆಂಗಳೂರಿನ 46 ವರ್ಷದ ವೈದ್ಯರಾಗಿದ್ದಾರೆ ಮತ್ತು ಇನ್ನೊಬ್ಬರು 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದು, ಅವರು ನಕಾರಾತ್ಮಕ ಕೋವಿಡ್ ಪರೀಕ್ಷಾ ವರದಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಇಬ್ಬರೂ ರೋಗಿಗಳು ಕೋವಿಡ್-19 ಲಸಿಕೆ ಎರಡು ಬಾರಿ ಹಾಕಿಸಿಕೊಂಡಿದ್ದರು.