ವಿಜಯಪುರ : ಕರ್ತವ್ಯನಿರತ ಯೋಧನೊಬ್ಬ ಸೇನಾ ಕ್ಯಾಂಪ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕರ್ನಾಟಕ ಮೂಲದ ಈ ಸೈನಿಕ ದೆಹಲಿಯ ಮೀರತ್ ಬಳಿ ಇರುವ ಎಂಇಜಿ ಯೂನಿಟ್-9ರ ಸೇನಾ ಕ್ಯಾಂಪ್ನಲ್ಲಿ ನೇಣು ಹಾಕಿಕೊಂಡಿದ್ದಾನೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಸೈನಿಕ ಮಂಜುನಾಥ ಯಲ್ಲಪ್ಪ ಹೂಗಾರ (22) ಆತ್ಮಹತ್ಯೆ ಮಾಡಿಕೊಂಡ ಯೋಧ.
ಈತ ತರಬೇತಿ ಮುಗಿಸಿಕೊಂಡು ಒಂದೂವರೆ ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದ. ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸೇನಾ ಕ್ಯಾಂಪ್ ಅಧಿಕಾರಿಗಳು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಮಂಜುನಾಥಗೆ ತಂದೆ ಯಲ್ಲಪ್ಪ, ತಾಯಿ ನಾಗಮ್ಮ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ಯೋಧನ ಕಳೇಬರ ಇನ್ನೆರಡು ದಿನಗಳಲ್ಲಿ ಸ್ವಗ್ರಾಮಕ್ಕೆ ತಲುಪುವ ನಿರೀಕ್ಷೆ ಇದೆ. ಸದ್ಯಕ್ಕೆ ದೆಹಲಿ ಸೇನಾ ಆಸ್ಪತ್ರೆಯಲ್ಲಿ ಮೃತದೇಹವಿದ್ದು ಮರಣೋತ್ತರ ಪರೀಕ್ಷೆ ನಡೆದ ಬಳಿಕ ವಿಮಾನದ ಮೂಲಕ ಬೆಂಗಳೂರು ಇಲ್ಲವೇ ಬೆಳಗಾವಿ ಮೂಲಕ ಮುದ್ದೇಬಿಹಾಳಕ್ಕೆ ತಲುಪಲಿದೆ ಎನ್ನಲಾಗಿದೆ.