ಮಾತಿನ ಮೇಲೆ ಹಿಡಿತವಿದ್ದರೆ ಯಶಸ್ಸು ಖಚಿತ ಅಂತಾರೆ ಚಾಣಕ್ಯರು.

ಮಾತಿನ ಮೇಲೆ ಹಿಡಿತವಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಬಹುದು ಅಂತಾರೆ ಚಾಣಕ್ಯರು. ಹಾಗಾದ್ರೆ ಯಾವ ಸಮಯದಲ್ಲಿ ಎಷ್ಟು ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾದರೂ ಏನು ಎಂಬ ವಿಷಯದ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನಿಮ್ಮ ಜೊತೆ ಯಾರಾದರೂ ಮಾತನಾಡುತ್ತಿದ್ದಾಗ, ನೀವು ಅವರೊಂದಿಗೆ ವಿನಯದಿಂದ ಮಾತನಾಡಬೇಕು. ಅವರು ನಿಮಗೆ ಎಷ್ಟೇ ಆಪ್ತರಾಗಿರಲಿ ಅಥವಾ ಅವರ ಪರಿಚಯವೇ ನಿಮಗೆ ಇಲ್ಲದಿರಬಹುದು. ಆದ್ರೆ ನಿಮ್ಮ ಮಾತು ಮಾತ್ರ ವಿನಯದಿಂದ ಕೂಡಿರಬೇಕು. ನಾವಾಡುವ ಮಾತು ಎದುರಿನವರ ಮನಸ್ಸಿಗೆ ನೋವುಂಟು ಮಾಡಬಾರದು. ನಾವು ಆಡುವ ಮಾತಿನಿಂದ ಎದುರಿಗಿರುವವರ ಮೇಲೆ ಎಂಥ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ನಾವು ಅರಿತಿರಬೇಕು. ಅದನ್ನು ಬಿಟ್ಟು ಬಾಯಿಗೆ ಬಂದದ್ದನ್ನು ಮಾತನಾಡಿದರೆ ನಿಮ್ಮ ಬಗ್ಗೆ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ಯೋಚಿಸಿ ಮಾತನಾಡುವುದು ಒಳಿತು.

ಎರಡನೇಯದಾಗಿ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು. ಉದಾಹರಣೆಗೆ ಇಬ್ಬರು ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಆ ವಿಷಯದ ಬಗ್ಗೆ ಪೂರ್ಣ ಮಾಹಿತಿ ನಿಮಗಿರುವುದಿಲ್ಲ. ಆದರೂ ಕೂಡ ನೀವು ಅಧಿಕಪ್ರಸಂಗಿಯಂತೆ ನಡುವೆ ಬಾಯಿ ಹಾಕಿದರೆ, ನಿಮ್ಮ ಗೌರವ ಕಡಿಮೆಯಾಗುತ್ತದೆ. ಜನ ಎದುರೆದುರಿಗೆ ನಿಮ್ಮನ್ನು ಆಡಿಕೊಳ್ಳಲು ಶುರು ಮಾಡುತ್ತಾರೆ. ಹಾಗಾಗಿ ಯಾವುದೇ ವಿಷಯದ ಬಗ್ಗೆ ನಿಮಗೆ ಗೊತ್ತಿರದಿದ್ದಲ್ಲಿ ಮಾತನಾಡಬೇಡಿ.

ಮೂರನೇಯದಾಗಿ ಕೆಲವರು ನೀವು ಮಾತನಾಡಿದ್ರೇನೆ ತಪ್ಪು ಅನ್ನೋ ರೀತಿ ಆಡ್ತಾರೆ. ನೀವೆಷ್ಟೇ ಒಳ್ಳೆಯದಾಗಿ ಮಾತನಾಡಿದ್ರೂ, ನಿಮ್ಮ ಮೇಲೆ ಸಿಡುಕುತ್ತಾರೆ. ನಿಮ್ಮ ಪ್ರತೀ ಮಾತಿನಲ್ಲೂ ತಪ್ಪು ಕಂಡು ಹಿಡಿಯುತ್ತಾರೆ. ಅಂಥವರು ಯಾರೇ ಆದರೂ ಅವರ ಜೊತೆ ಹೆಚ್ಚು ಮಾತನಾಡಬೇಡಿ. ಹಾಗೇನಾದರೂ ನೀವು, ನಮ್ಮವರೇ ಅಲಾ ಅಂತಾ ಮಾತನಾಡಿಸಿದರೆ, ಅವರು ನಿಮಗೆ ಮರ್ಯಾದೆ ಕೊಡುವುದನ್ನು ಕಡಿಮೆ ಮಾಡುತ್ತಾರೆ. ನಿಮ್ಮನ್ನು ಎಲ್ಲರೆದುರು ಅಗೌರವಿಸುತ್ತಾರೆ. ಹಾಗಾಗಿ ನಿಮ್ಮ ಬೆಲೆ ಅವರಿಗೆ ತಿಳಿಯುವ ತನಕ ಮೌನವಹಿಸಿ.

ನಾಲ್ಕನೇಯದಾಗಿ ಎದುರಿನವರು ನಿಮ್ಮ ಬಳಿ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಆಗ ನೀವು ಅಡ್ಡ ಮಾತನಾಡದೇ ತಾಳ್ಮೆಯಿಂದ ಕೇಳಿಸಿಕೊಳ್ಳಿ, ಅದನ್ನು ಬಿಟ್ಟು, ನಿಮ್ಮದೇ ಸರಿ ಅಥವಾ ನನಗೆಲ್ಲಾ ಗೊತ್ತು ಅನ್ನುವ ರೀತಿ ಮಾತನಾಡಬೇಡಿ. ಯಾಕಂದ್ರೆ ಮಾತನಾಡುವ ಸಮಯದಲ್ಲಿ ಮಾತನಾಡಿ ಕೇಳಿಸಿಕೊಳ್ಳುವ ಸಮಯದಲ್ಲಿ ಚೆನ್ನಾಗಿ ಕೇಳಿಸಿಕೊಳ್ಳುವವನು ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸುತ್ತಾನೆ ಅಂತಾ ಚಾಣಕ್ಯರು. ಹಾಗಾಗಿ ಕೇಳಿಸಿಕೊಳ್ಳಬೇಕಾದ ವಿಷಯವನ್ನು ಮೌನವಾಗಿ, ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು.

About The Author