ಇಸ್ರೇಲ್ : 2021 ರ ಮಿಸ್ ಯುನಿವರ್ಸ್ ಸ್ಪರ್ಧೆಯ ವಿಜೇತೆಯಾಗಿ ಚಂಡೀಗಢ ಮೂಲದ ಹರ್ನಾಜ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್ನ ಐಲಾಟ್ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟ ದೊರಕಿದೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ ಹರ್ನಾಜ್ ಸಂಧು 2021ರ ವಿಶ್ವ ಸುಂದರಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್ನಲ್ಲಿ ನಡೆದ ಸ್ಪರ್ಧೆಯನ್ನು ಲೈವ್ ಸ್ಟ್ರೀಮ್ನಲ್ಲಿ ಟೆಲಿಕಾಸ್ಟ್ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಹರ್ನಾಜ್ ಸಂಧು ಅವರಿಗೆ ಮೆಕ್ಸಿಕೊದ 2020ರ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದ್ದಾರೆ.
ಹರ್ನಾಜ್ ಸಂಧು ಅವರಿಗೆ ಸ್ಪರ್ಧೆಯಲ್ಲಿ ಮೊದಲ ಮೂರು ಸುತ್ತಿನ ಭಾಗವಾಗಿ ಇಂದು ಯುವತಿಯರು ಎದುರಿಸುತ್ತಿರುವ ಒತ್ತಡ ಹೇಗೆ ಎದುರಿಸಬೇಕು? ಹಾಗೂ ನಿಮ್ಮ ಸಲಹೆಗಳೇನು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಹರ್ನಾಜ್ ಸಂಧು ಇಂದಿನ ಯುವ ಜನತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಆತ್ಮವಿಶ್ವಾಸ ಅವರಿಗೆ ಅವರ ಮೇಲೆ ಇರುವ ನಂಬಿಕೆಯ ಕೊರತೆ. ಇತರರು ಏನೆಂದುಕೊಳ್ಳುತ್ತಾರೊ ಎನ್ನುವ ದುಗುಢ ಭಾವನೆಯಿಂದ ಇಂದಿನ ಯುವಜನತೆ ತಾವು ಮಾಡುವ ಕೆಲಸದಿಂದ ವಿಮುಖರಾಗುತ್ತಿದ್ದಾರೆ ಎಂದರು. ಜತಗೆ ಸಲಹೆಯಾಗಿ ಅದರ ಬದಲು ಬೇರೆಯವರೊಂದಿಗೆ ಹೊಂದಾಣಿಕೆ ಮಾಡುವುದನ್ನು ನಿಲ್ಲಿಸಿ, ನಿಮಗೇ ನಿಮ್ಮದೇ ಅದ ಜೀವನವಿದೆ, ಕನಸಿದೆ. ಅದರೆಡೆಗೆ ಗಮನ ನೀಡಿ. ಪ್ರಪಂಚದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಅದನ್ನು ಚರ್ಚಿಸಿ. ನಿಮ್ಮ ಕನಸಿಗೆ ನೀವೇ ಧ್ವನಿಯಾಗಬೇಕು. ನನ್ನನ್ನು ನಾನು ಹೆಚ್ಚು ನಂಬುತ್ತೇನೆ ಅದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದು ಸಲಹೆ ನೀಡುವ ಮೂಲಕ ತೀರಪುಗಾರರ ಪ್ರಶ್ನೆಗೆ ಹರ್ನಾಜ್ ಸಂಧು ಉತ್ತರಿಸಿದ್ದಾರೆ.