ಬೆಂಗಳೂರು: ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟಮಾಡಿ ಇಬ್ಬರು ರೈತರಿಗೆ 11 ಲಕ್ಷ ರೂ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂವರು ವಂಚಕರು 1 ಕೆಜಿ ಚಿನ್ನದ ನಾಣ್ಯಗಳನ್ನು 11 ಲಕ್ಷರೂ.ಗೆ ಮಾರಾಟ ಮಾಡಿದ್ದಾರೆ. ಮೆಜೆಸ್ಟಿಕ್ನಲ್ಲಿ ನಿಂತಿದ್ದಾಗ ದಿನಗೂಲಿ ಕಾರ್ಮಿಕರ ಸೋಗಿನಲ್ಲಿ ಬಂದ ಮೂವರು ನಾವು ಕೆಲಸ ಮಾಡುತ್ತಿದ್ದ ಜಾಗದಲ್ಲಿ 4 ಕೆಜಿ ಚಿನ್ನದ ನಾಣ್ಯಗಳು ದೊರೆತಿವೆ ಅದರಲ್ಲಿ ಒಂದು ಕೆಜಿ ನಾಣ್ಯಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ನಿಮಗೆ ಕೊಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಾಣ್ಯಗಳನ್ನು ಹತ್ತಿರದ ಅಕ್ಕಸಾಲಿಗನ ಅಂಗಡಿಯಲ್ಲಿ ತೋರಿಸಿದಾಗ ಅದು ಅಸಲಿ ಚಿನ್ನದ ನಾಣ್ಯಗಳು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಳಪ್ಪ ಎನ್ನುವವರು ಉಳಿತಾಯ ಮಾಡಿದ್ದ 7 ಲಕ್ಷ ರೂಗಳನ್ನು ಹಾಗೂ ಸ್ನೇಹಿತ ರಾಜಣ್ಣನ ಬಳಿ 4 ಲಕ್ಷ ರೂಗಳನ್ನು ತೆಗೆದುಕೊಂಡು ವಂಚಕರಿಗೆ ನೀಡಿದ್ದಾರೆ. ಬಳಿಕ ವಂಚಕರು ಬಟ್ಟೆಯಲ್ಲಿ ಸುತ್ತಿ ಚಿನ್ನದ ನಾಣ್ಯಗಳನ್ನು ನೀಡಿದ್ದಾರೆ. ನಾಣ್ಯಗಳಿರುವ ಬಟ್ಟೆಯ ಗಂಟನ್ನು ಪಡೆದ ಬಳಿಕ ರೈತರಿಬ್ಬರು ಹತ್ತಿರದ ತುಳಸಿ ಪಾರ್ಕ್ನಲ್ಲಿ ಹೋಗಿ ನೋಡಿದಾಗ ಅದರಲ್ಲಿ ನಕಲಿ ನಾಣ್ಯಗಳಿರುವುದು ತಿಳಿದುಬಂದಿದೆ. ಈ ಕುರಿತು ಗಾಳಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬೀಸಿದ್ದಾರೆ.