ಸಿನಿಮಾ : ಟೀಂ ಇಂಡಿಯಾ ಆಟಗಾರ ಶ್ರೀಶಾಂತ್ ಅವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ಹಿಂದಿಯಲ್ಲಿ ನಟಿಸಿರುವ ಶ್ರೀಶಾಂತ್ ಈಗ ತಮಿಳಿಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಖ್ಯಾತ ನಟಿಯರಾದ ಸಮಂತಾ ಹಾಗೂ ನಯನತಾರಾ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶ್ರೀಶಾಂತ್ ಅವರು ಇನ್ನುಮುಂದೆ ಸಂಪೂರ್ಣವಾಗಿ ಚಿತ್ರರಂಗದಲ್ಲೇ ತೊಡಗಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
‘ಕಾದು ವಾಕುಲ ರೆಂಡು ಕಾಧಲ್’ ಚಿತ್ರದಲ್ಲಿ ಸಮಂತಾ ನಟಿಸಿದ್ದಾರೆ. ಕಳೆದ ತಿಂಗಳು ಈ ಚಿತ್ರದಲ್ಲಿನ ಸಮಂತಾ ಪಾತ್ರದ ಫಸ್ಟ್ಲುಕ್ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ನಯನತಾರ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರ ಪ್ರಿಯಕರ ವಿಘ್ನೇಶ್ ಶಿವನ್ ಅವರು ‘ಕಾದು ವಾಕುಲ ರೆಂಡು ಕಾಧಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರೀಶಾಂತ್ ಕೂಡ ಸೇರ್ಪಡೆ ಆಗಿದ್ದಾರೆ.
ಶ್ರೀಶಾಂತ್ ಪಾತ್ರ ಏನು ಎಂಬ ಕುತೂಹಲಕ್ಕೆ ಅವರೇ ಉತ್ತರ ನೀಡಿದ್ದಾರೆ. ನಾನು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಖುಷಿ ನೀಡಿದೆ. ಇದು ಸಿನಿಮಾದಲ್ಲಿ ಬರುವ ಅತ್ಯಂತ ಪ್ರಮುಖ ಪಾತ್ರ. ನಾನು ಈ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಸಿನಿಮಾ ತೆರೆಕಂಡ ನಂತರದಲ್ಲಿ ಆ ಬಗ್ಗೆ ನಿಮಗೆ ತಿಳಿಯಲಿದೆ’ ಎಂದು ಶ್ರೀಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ಖುಷಿಪಟ್ಟಿದ್ದಾರೆ.