ಮಂಡ್ಯ : ಡಿಸೆಂಬರ್ 24ರಂದು ಶರತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಯಿತು. ಡಿಸೆಂಬರ್ 24 ರ ಮಧ್ಯರಾತ್ರಿ 1.10ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ಶರತ್ರನ್ನು ಮೈಸೂರಿನ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಶರತ್ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿತ್ತು. ಎರಡು ದಿನಗಳ ಕಾಲ ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಡಿಸೆಂಬರ್ 26 ರಂದು ಮೆದುಳು ಕಾಂಡದ ವೈಫಲ್ಯದಿಂದಾಗಿ ಅವರು ಮೆದುಳು ಸತ್ತಿರುವುದು ಧೃಡವಾಯಿತು. ಅಪೋಲೊ ಬಿ.ಜಿ.ಎಸ್. ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಇದನ್ನು ಪೋಷಕರಿಗೆ ತಿಳಿಸಿದರು.
ಇನ್ನು ಶರತ್ ರವರ ಮಿದುಳು ಹೊರತಪಡಿಸಿ ಉಳಿದ ಅಂಗಾಂಗಗಳು ಆರೋಗ್ಯವಾಗಿದ್ದವು. ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಅವರು ಅಂಗಾಂಗ ದಾನ ಮಾಡುವ ಸ್ಥಿತಿಯಲ್ಲಿರುವುದು ತಿಳಿಯಿತು. ಈ ವಿಚಾರವನ್ನು ಶರತ್ ಅವರ ಮನೆಯವರಿಗೆ ತಿಳಿಸಲಾಯಿತು. ಶರತ್ ಅವರ ಅಂಗಾಂಗದಿಂದ 6 ಜನರ ಬಾಳು ಬೆಳಗಬಹುದು ಎಂಬುದನ್ನು ವಿವರಿಸಲಾಯಿತು. ಆ ಪರಿಸ್ಥಿತಿಯಲ್ಲಿ ದುಖಃತಪ್ತರಾಗಿದ್ದ ಅವರ ತಂದೆ ತಾಯಿ ಆ ದುಖಃದಲ್ಲೂ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು. ಈ ಮೂಲಕ ಮಗನ ಸಾವು ವ್ಯರ್ಥವಾಗದಂತೆ ನೋಡಿಕೊಂಡರು. ಡಿಸೆಂಬರ್ 26 ರಂದು 5.10 ಗೆ ಶ್ರೀ ಶರತ್ ಅವರ ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾವನ್ನು ಪಡೆಯಲಾಯಿತು. ಈ ಎಲ್ಲಾ ಅಂಗಾಂಗಗಳನ್ನು ನಿಯಮಗಳ ಪ್ರಕಾರ ದಾಖಲಿಸಿಕೊಂಡು ಕಾಯುತ್ತಿದ್ದವರಿಗೆ ಅಳವಡಿಸಲು ಕಳುಹಿಸಿಕೊಡಲಾಯಿತು.ಈ ಮೂಲಕ ಶರತ್ ಅಕಾಲಿಕವಾಗಿ ಸಾವನ್ನಪ್ಪಿದ್ದರು ಹಲವರ ಪ್ರಾಣ ಉಳಿಸಿ ಅವರು ಈ ಮೂಲಕ ಬದುಕಿದ್ದಾರೆ. ಶರತ್ ಅವರ ಪೋಷಕರ ಈ ನಿರ್ಧಾರದಿಂದಾಗಿ ಹಲವರ ಜೀವ ಉಳಿದಿದೆ. ಶರತ್ ಪೋಷಕರ ಈ ಧೃಡ ನಿರ್ಧಾರ ಎಲ್ಲರಿಗೂ ಮಾದರಿಯಾಗಲಿ.




