ನವದೆಹಲಿ: ಕೊರೊನಾ ಲಸಿಕೆಯನ್ನು ಹಲವಾರು ರಾಜ್ಯಗಳಲ್ಲಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಕೆಲವೊಂದು ಸೌಲಭ್ಯ ಕೊಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಜನರನ್ನು ಹಿಡಿದು ತಂದು ಒತ್ತಾಯಪೂರ್ವಕವಾಗಿ ಲಸಿಕೆ ಹಾಕಲಾಗುತ್ತಿದೆ.
ದಮ್ಮಯ್ಯ ಎಂದರೂ ಬಿಡದೇ ಅವರಿಗೆ ಲಸಿಕೆ ಹಾಕುವ ವಿಡಿಯೋ ಇದಾಗಲೇ ಸಾಕಷ್ಟು ವೈರಲ್ ಆಗಿವೆ.
ಆದರೆ ಇದರ ಮಧ್ಯೆಯೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ಒಂದನ್ನು ನೀಡಿದ್ದು, ಲಸಿಕೆ ಪಡೆಯಲು ಯಾರಿಗೂ ಬಲವಂತ ಮಾಡುವುದಿಲ್ಲ. ಜನರ ಅನುಮತಿ ಇಲ್ಲದೆಯೇ ಲಸಿಕೆ ಹಾಕುವಂತಿಲ್ಲ ಹಾಗೂ ಹಾಕಬಾರದು ಎಂದು ಹೇಳಿದೆ. ಜನರು ವ್ಯಕ್ತಿಯ ಕೊಟ್ಟರೆ ಮಾತ್ರ ಲಸಿಕೆ ಹಾಕಲಾಗುವುದು ಎಂದು ಅದು ಸುಪ್ರೀಂಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಕೋವಿಡ್ ಮಾರ್ಗ ಸೂಚಿಯಲ್ಲಿಯೇ ಹೇಳಲಾಗಿದೆ. ಈ ಮಾರ್ಗಸೂಚಿ ಪ್ರಕಾರ ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ ಎಂದು ಕೇಂದ್ರ ಹೇಳಿದೆ.
ವಿಕಲಚೇತನರ ಮನೆ – ಮನೆಗೆ ಹೋಗಿ, ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೀಡಿಕೆ ಬಗ್ಗೆ ಸ್ವಯಂಸೇವಾ ಸಂಸ್ಥೆ ಎವಾರಾ ಫೌಂಡೇಶನ್ ಮಾಡಿದ ಮನವಿಗೆ ಪ್ರತಿಯಾಗಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಕೇಂದ್ರವು ಈ ಮಾಹಿತಿ ನೀಡಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರ ನೀಡುವ ಕುರಿತಂತೆ ವಿಕಲಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡುವ ವಿಷಯದ ಬಗ್ಗೆ ಹಾಗೂ ಈ ಸಂಬಂಧದ ಪ್ರಮಾಣ ಪತ್ರದ ಕಡ್ಡಾಯಗೊಳಿಸಿದ ಎಸ್ಒಪಿಯನ್ನ ನೀಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

